ಚಿಕ್ಕೋಡಿ : ಅತಿಯಾದ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್‌ಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದನ್ನು ಅರಿತ ತಾಲೂಕಿನ ಯಡೂರ ಗ್ರಾಮದ ಶಿವತೇಜ ಫೌಂಡೇಶನ್ ಕಾರ್ಯಕರ್ತರು ಸ್ವ ಪ್ರೇರಣೆಯಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಚಿಕ್ಕೋಡಿ ಉಪವಿಭಾಗದ ಬಹುತೇಕ ರಸ್ತೆಗಳು ಹದಗೆಟ್ಟ ಹೋಗಿವೆ. ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸುವಂಥ ಪ್ರಸಂಗ ಎದುರಾಗಿದೆ. ಆದ್ರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಇದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ.
ಸದ್ಯ ಸಾರ್ವಜನಿಕರ ತೊಂದರೆ ಅರಿತ ಶಿವತೇಜ ಸೋಶಿಯಲ್ ಫೌಂಡೇಶನ್ ಸದಸ್ಯರು ಯಡೂರ-ಮಾಂಜರಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಈಗ ಫೌಂಡೇಶನ್ ಸದಸ್ಯರು ಮಾಡುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರು.