ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿ ಕಬ್ಬು ಕಾರ್ಖಾನೆಗಳಲ್ಲಿ ಉತ್ಪಾದನೆ ಆಗುವ ಎಥೆನಾಲ್ ಸದ್ಬಳಕೆ ಸಂಬಂಧ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸದನಕ್ಕೆ ಭರವಸೆ ನೀಡಿದ್ದಾರೆ.
ನಿಯಮ 72 ರ ಅಡಿ ಮಹಾಂತೇಶ್ ಕವಟಗಿಮಠ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿ, ಕಬ್ಬು ಬೆಳೆಯನ್ನೂ ಸಹ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ವ್ಯಾಪ್ತಿಯ ಅಡಿ ತರಬೇಕು. ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದ ಒಟ್ಟು 88 ನೊಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳ ಪೈಕಿ 65 ಕಾರ್ಖಾನೆಗಳು ಕಾರ್ಯನಿರತವಾಗಿವೆ. ವಲಯವಾರು ಗಮನಹರಿಸಿದರೆ, ಸಾರ್ವಜನಿಕ ವಲಯದಲ್ಲಿ ಎರಡು ಸ್ಥಗಿತಗೊಂಡಿರುವ ಕಾರ್ಖಾನೆಗಳಿವೆ, ಜಂತಿ ವಲಯದಲ್ಲಿ ಸಮಾಪನೆಗೊಂಡ ಒಂದು ಕಾರ್ಖಾನೆ ಇದೆ, ಸಹಕಾರಿ ವಲಯದಲ್ಲಿ 13 ಕಾರ್ಯನಿರತ, 5 ಸ್ಥಗಿತ, 4 ಸಮಾಪನೆ ಸೇರಿದಂತೆ ಒಟ್ಟು 22 ಕಾರ್ಖಾನೆಗಳು ಇವೆ.
ಇನ್ನು ಸಹಕಾರಿ ವಲಯ ಗುತ್ತಿಗೆ ವಿಭಾಗದಲ್ಲಿ 8 ಕಾರ್ಯನಿರತ ಸಕ್ಕರೆ ಕಾರ್ಖಾನೆ ಇದ್ದರೆ ಅತಿ ಹೆಚ್ಚು ಕಾರ್ಖಾನೆಗಳಿರುವುದು ಖಾಸಗಿ ವಲಯದಲ್ಲಿ. ಒಟ್ಟು 55 ಕಾರ್ಖಾನೆಗಳಿದ್ದು, ಇದರಲ್ಲಿ 44 ಕಾರ್ಯನಿರತ ಹಾಗೂ 11 ಸ್ಥಗಿತ ಕಾರ್ಖಾನೆಗಳಾಗಿವೆ. ಎಲ್ಲ ವಲಯಗಳೂ ಸೇರಿದಂತೆ ಒಟ್ಟು 88 ಕಾರ್ಖಾನೆಗಳಿದ್ದು, ಅದರಲ್ಲಿ 65 ಕಾರ್ಯನಿರತ, 18 ಸ್ಥಗಿತ ಹಾಗೂ 5 ಸಮಾಪನೆ ಕಾರ್ಖಾನೆಗಳಿವೆ ಎಂದು ತಿಳಿಸಿದರು.
ರಾಜ್ಯದ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ 2016-17 ರಲ್ಲಿ ಪಾವತಿಸಬೇಕಾದ ಮೊತ್ತ 5343.07 ಕೋಟಿ ರೂ., ಪಾವತಿಸಿದ ಮೊತ್ತ 6702.84 ಕೋಟಿ ರೂ. ಆಗಿದ್ದು ಯಾವುದೇ ಬಾಕಿ ಇರುವುದಿಲ್ಲ.
2017-18 ರಲ್ಲಿ ಪಾವತಿಸಬೇಕಾದ ಮೊತ್ತ 9851.83 ಕೋಟಿ ರೂ, ಪಾವತಿಸಿದ ಮೊತ್ತ 10605.12 ಕೋಟಿ ರೂ. 2018-19 ರಲ್ಲಿ ಪಾವತಿಸಬೇಕಾದ ಮೊತ್ತ 11,948.39 ಕೋಟಿ ರೂ ಹಾಗೂ ಪಾವತಿಸಿದ ಮೊತ್ತ 12083.79 ಕೋಟಿ ರೂ ಆಗಿದ್ದು, 8.93 ಕೋಟಿ ರೂ. ನೀಡುವುದು ಬಾಕಿ ಉಳಿದಿದೆ.
2019-20 ನೇ ಸಾಲಿನಲ್ಲಿ ಪಾವತಿಸಬೇಕಾದ ಮೊತ್ತ 10428.96 ಆಗಿದ್ದು, ಪಾವತಿಸಿದ ಮೊತ್ತ 10,671.94 ಕೋಟಿ ರೂ ಆಗಿದ್ದು 5.80 ಕೋಟಿ ರೂ ಬಾಕಿ ಇದೆ. ಕೊನೆಯದಾಗಿ 2020-21 ನೇ ಸಾಲಿನಲ್ಲಿ ಪಾವತಿಸಬೇಕಾದ ಮೊತ್ತ 13,32,449 ಕೋಟಿ ರೂ ಆಗಿದ್ದು, ಪಾವತಿಸಿದ ಮೊತ್ತ 13,53,308 ಕೋಟಿ ರೂ ಆಗಿದ್ದು ಯಾವುದೇ ಬಾಕಿ ಉಳಿದಿಲ್ಲ ಎಂದು ವಿವರಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು?
ಮಹಾಂತೇಶ್ ಕವಟಗಿಮಠ ಮಾತನಾಡಿ, ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ರಾಧಾನ್ಯತೆ ನೀಡಿದೆ. ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ತಿಳಿಸಬೇಕು. ರೈತರ ರಕ್ಷಣೆಗೆ ಮುಂದಾಗಬೇಕು. ಅತಿವೃಷ್ಟಿಯಿಂದಾಗಿ ಎದುರಾದ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ನೀಡಲು 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, 10 ವರ್ಷ ಹಿಂದೆಯೇ ಕಬ್ಬನ್ನು ವಿಮಾ ವ್ಯಾಪ್ತಿಗೆ ಸೇರಿಸುವ ಯತ್ನವಾಗಿತ್ತು. ಆದರೆ, ಇದು ವಾಣಿಜ್ಯ ಬೆಳೆ ಆಗಿರುವ ಹಿನ್ನೆಲೆ ವಿಮಾ ಮೊತ್ತ ದೊಡ್ಡದಾಗಲಿದೆ ಎಂಬ ಕಾರಣಕ್ಕೆ ಕೈ ಬಿಡಲಾಗಿತ್ತು ಎಂದರು. ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಲಕ್ಷ್ಮಣ್ ಸವದಿ, ಮಹಾಂತೇಶ್ ಕವಟಗಿಮಠ, ಎಸ್.ಆರ್. ಪಾಟೀಲ್, ಬಸವರಾಜ ಪಾಟೀಲ್ ಇಟಗಿ ಮತ್ತಿತರರು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಸಲಹೆ ಸೂಚನೆ ನೀಡಿದರು