ಚಿಕ್ಕೋಡಿ : ಹಲಾಲ್ ಕಟ್ ವಿರೋಧಿಸುವ, ಜಟ್ಕಾ ಕಟ್ ಮಾಡುತ್ತಿರುವ ಹಿಂದೂಪರ ಸಂಘಟನೆಗಳ ಪರವಾಗಿ ನಾವು ಇರುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಕರ್ನಾಟಕ ಭಾಗಕ್ಕಿಂತ ಕರಾವಳಿ ಭಾಗದಲ್ಲಿ ಹಲಾಲ್ ಕಟ್ ಹೆಚ್ಚು. ಹೀಗಾಗಿ, ಹಿಂದೂಪರ ಸಂಘಟನೆಗಳು ಹಲಾಲ್ ಕಟ್ಗೆ ವಿರೋಧ ಹಾಗೂ ಜಟ್ಕಾ ಕಟ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸರಿ ಅನ್ನಿಸುತ್ತದೆ. ಹೀಗಾಗಿ, ಹಿಂದೂಪರ ಸಂಘಟನೆಗಳ ಪರವಾಗಿ ನಾವು ಇರುತ್ತೇವೆ ಎಂದರು.
ಇದಲ್ಲದೇ ಮುಸ್ಲಿಮರು ಹಲಾಲ್ ಮಾಡುವಂತೆಯೇ ಜಟ್ಕಾ ಕಟ್ ಮಾಡಬೇಕು. ಸಂಘಟನೆ ಪರವಾಗಿ ನಾವಿದ್ದೇವೆ. ಹಲಾಲ್ ಹಾಗೂ ಜಟ್ಕಾ ಕಟ್ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ಜವಾಬ್ದಾರಿಯುತ ಸಚಿವೆಯಾಗಿ ತಿಳಿದುಕೊಳ್ಳದೇ ಮಾತನಾಡುವುದು ನನಗೆ ಮುಜುಗುರ ಅನ್ನಿಸುತ್ತದೆ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇದಕ್ಕೂ ಮುಂಚೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ರಾಜ್ಯ ಧಾರ್ಮಿಕ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಗೋಪೂಜೆ, ಭೂಮಿ ಪೂಜೆ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಬೆಳಗಾವಿ ಡಿಸಿ ಎಂ ಜಿ ಹಿರೇಮಠ ಹಾಗೂ ಸ್ವಾಮೀಜಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: EGO ಬಿಟ್ಟು ಎಕ್ಸಾಂಗೆ ಹಾಜರಾಗಿ.. ಗೈರಾದವ್ರಿಗೆ ಮರು ಪರೀಕ್ಷೆ ಇಲ್ಲ: ಶಿಕ್ಷಣ ಸಚಿವ ಬಿ.ಸಿ ನಾಗೇಶ್