ಬೆಳಗಾವಿ : ಜಿಲ್ಲೆಯ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ಅವಕಾಶ ಕೊಡುವುದಿಲ್ಲ. ಜನರಿಗೆ ಅಲ್ಲೇ ಖರೀದಿ ಮಾಡಬೇಕು. ಇಲ್ಲೇ ಮಾಡಬೇಕು ಅನ್ನೋದು ತಪ್ಪು ಎಂದು ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ರೆಗಳಲ್ಲಿ ನಿರ್ಬಂಧ ಹಾಕುವ ಪ್ರಶ್ನೆ ಬರುವುದಿಲ್ಲ. ನಾವು ಕೂಡ ನಿರ್ಬಂಧ ಹಾಕುವುದಿಲ್ಲ.
ಜನರು ನಿರ್ಬಂಧ ಹಾಕಿದರೆ ನಮಗೆ ಏನೂ ಹೇಳಲು ಆಗಲ್ಲ. ನಾನು ಒಬ್ಬ ವಕೀಲನಾಗಿ ಹೇಳುತ್ತೇನೆ. ಎಲ್ಲರಿಗೂ ತಮಗೆ ಬೇಕಾದಲ್ಲಿ ವ್ಯವಹಾರ ಮಾಡಲು ಅವಕಾಶವಿದೆ. ಎಲ್ಲಿಂದ ಏನು ಖರೀದಿ ಮಾಡಬೇಕು ಅಂತಾ ಜನರು ತೀರ್ಮಾನ ಮಾಡಬೇಕೆಂದರು.
ಸ್ವಾಮೀಜಿಗಳ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಸಿದ್ದರಾಮಯ್ಯ ಭಗವಾ ಪೇಟಾ ಕಟ್ಟಲು ಹೋದರೆ, ಅದನ್ನು ಕಿತ್ತು ಒಗೆದಿರುವ ವಿಡಿಯೋ ನೋಡಿದ್ದೇವೆ. ಭಗವಾ ಪೇಟಾ ಕಿತ್ತು ಒಗೆಯುತ್ತಾರೆ ಅಂದರೆ ಎಷ್ಟು ಹಿಂದೂ ಮೇಲೆ ದ್ವೇಷ ಇರಬೇಕು ಅವರಿಗೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಟೀಕಿಸಿದರು.
ಸಾವಿರಾರು ವರ್ಷಗಳಿಂದ ಸ್ವಾಮೀಜಿ ಪೇಟಾ ಕಟ್ಟಿಕೊಂಡು ಬರುತ್ತಿದ್ದಾರೆ. ಹಿಂದೂ ಬೇರೆ, ಅಲ್ಪಸಂಖ್ಯಾತರು ಬೇರೆ ಅಂತಾ ಸಿದ್ದರಾಮಯ್ಯ ಧೃವೀಕರಣ ಮಾಡುತ್ತಿದ್ದಾರೆ. ರಾಜ್ಯದ ಜನರು ಬಹಳ ಜಾಣರಿದ್ದು, ಮೊದಲಿನ ರೀತಿ ಉಳಿದಿಲ್ಲ. ಹಿಂದೂ ವಿರೋಧಿ ಭಾಷಣ ಮಾಡಿ ಎಲ್ಲ ಸಮಾಜ ಒಕ್ಕಟ್ಟಾಗುತ್ತಾರೆ ಅಂದುಕೊಂಡಿದ್ದಾರೆ. ಆದರೆ, ಈಗ ಎಲ್ಲರೂ ಒಕ್ಕಟಾಗಿದ್ದು, ಇಂತಹ ರಾಜಕಾರಣಿ ಜನರಿಗೆ ಬೇಡವಾಗಿದೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕಳೆದ ಬಾರಿ ಸಂಪುಟದಲ್ಲಿ ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಕೊಟ್ಟಿಲ್ಲ. ಮರಾಠಾ ಸಮುದಾಯಕ್ಕೆ ಸಂಪುಟದಲ್ಲಿ ಅವಕಾಶ ಕೊಡಬೇಕೆಂದು ಶಾಸಕ ಬೆನಕೆ ಹೇಳಿದರು.
ರಾಜ್ಯದಲ್ಲಿ ಬಹಳಷ್ಟು ಮರಾಠಾ ಸಮುದಾಯದ ಜನರು ಇದ್ದಾರೆ. ಮರಾಠಾ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕೆಂದು ಬೇಡಿಕೆ ಇದೆ. ಸಚಿವ ಸ್ಥಾನಕ್ಕಾಗಿ ಯಾವುದೇ ಹೋರಾಟ ಮಾಡುವುದಿಲ್ಲ. ಹೈಕಮಾಂಡ್ ಮತ್ತು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಸಚಿವ ಸ್ಥಾನ ಕೊಟ್ಟರೇ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಚಾಮರಾಜನಗರದ ಗೋಪಾಲಸ್ವಾಮಿ ಜಾತ್ರೆಗೂ ಕಾಲಿಟ್ಟ ವ್ಯಾಪಾರ ನಿರ್ಬಂಧ ವಿವಾದ