ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಮೂರು ಕ್ಷೇತ್ರಗಳಿಗೆ ಬೆಳಗಾವಿಯ ಬಿ.ಕೆ ಮಾಡಲ್ ಪ್ರೌಢಶಾಲೆ ಆವರಣದಲ್ಲಿ ಮತದಾನ ಆರಂಭವಾಗಿದೆ.
ಖಾನಾಪುರ, ರಾಮದುರ್ಗ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರ ಹಾಗೂ ನೇಕಾರ ಸಹಕಾರಿ ಅಭಿವೃದ್ಧಿ ಮಂಡಳಿಯ ಪ್ರತಿನಿಧಿಗೆ ಚುನಾವಣೆ ನಡೆಯುತ್ತಿದೆ. ಈಗಾಗಲೇ 13 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಹೀಗಾಗಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಮೂರು ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ರೆಸಾರ್ಟ್ ರಾಜಕಾರಣದ ಮೂಲಕ ಗಮನ ಸೆಳೆದಿತ್ತು. ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ಸ್ಪರ್ಧೆಯ ಕಾರಣ ಚುನಾವಣೆ ಅಖಾಡ ರಂಗೇರಿತ್ತು. ಮಹಾರಾಷ್ಟ್ರದ ರೆಸಾರ್ಟ್ನಿಂದಲೇ ಖಾನಾಪುರ ಪಿಕೆಪಿಎಸ್ ಸದಸ್ಯರು ಮತದಾನ ಕೇಂದ್ರಕ್ಕೆ ಆಗಮಿಸಿದರು.
ಮಾಜಿ ಶಾಸಕ ಅರವಿಂದ ಪಾಟೀಲ ತಮ್ಮ ಬೆಂಬಲಿತರನ್ನು ಕರೆತಂದರೆ, ಇತ್ತ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ವಿಶೇಷ ವಾಹನದಲ್ಲಿ ತಮ್ಮ ಬೆಂಬಲಿತರನ್ನು ಕರೆ ತಂದರು. ಮತದಾರರ ಮನವೊಲಿಸಲು ಉಭಯ ನಾಯಕರು ತೀವ್ರ ಕಸರತ್ತು ಆರಂಭಿಸಿದ್ದಾರೆ.