ಬೆಳಗಾವಿ: ವಾಯವ್ಯ ಪದವೀಧರ-ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿ ಬಿಜೆಪಿಯ ಭಿನ್ನಮತ ಶಮನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದಾರೆ. ಕಳೆದ ತಿಂಗಳಷ್ಟೇ ಬಿಎಸ್‌ವೈ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಭೇಟಿ ನೀಡಿ ಭಿನ್ನಮತ ಶಮನಕ್ಕೆ ಯತ್ನಿಸಿದ್ದರು. ಆದರೆ ಅದು ಅಷ್ಟೊಂದು ಫಲ ನೀಡಿರಲಿಲ್ಲ. ಹೀಗಾಗಿ ಕೇಂದ್ರ ನಾಯಕರ ಸೂಚನೆ ಮೇರೆಗೆ ದೆಹಲಿಯಿಂದ ಬೆಳಗಾವಿಗೆ ಬಂದಿರುವ ಪ್ರಹ್ಲಾದ್ ಜೋಶಿ ಬೆಳಗಾವಿಯ ಸಂಕಂ ಹೋಟೆಲ್‌ನಲ್ಲಿ ಜಿಲ್ಲಾನಾಯಕರ ಜೊತೆಗೆ ಸಭೆ ನಡೆಸುತ್ತಿದ್ದಾರೆ.
ಈ ಸಭೆಯಲ್ಲಿ ಸಚಿವ ಉಮೇಶ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಜೊಲ್ಲೆ ದಂಪತಿ ಸೇರಿ ಬೆಳಗಾವಿ ನಗರ, ಗ್ರಾಮಾಂತರ ಭಾಗದ ಬಹುತೇಕ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿ ಬಿಜೆಪಿ ನಾಯಕರ ಭಿನ್ನಮತಕ್ಕೆ ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಗಳು ಅತಂತ್ರರಾಗಿದ್ದು, ಕೇಂದ್ರ ಸಚಿವ ಜೋಶಿ ಭೇಟಿಯಿಂದ ಭಿನ್ನಮತ ಶಮನವಾಗುತ್ತಾ? ಎಂಬುದೇ ಸದ್ಯದ ಕುತೂಹಲ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸದಲ್ಲಿದ್ದು, ಅಭಯ ಪಾಟೀಲ ತಡವಾಗಿ ಸಭೆಗೆ ಆಗಮಿಸುವ ಸಾಧ್ಯತೆ ಇದೆ. ಪಿ.ರಾಜೀವ್, ದುರ್ಯೋಧನ ಐಹೊಳೆ ಚಿಕ್ಕೋಡಿಯಲ್ಲಿ ನಡೆಯುವ ಸಭೆಗೆ ಹಾಜರಾಗಲಿದ್ದು, ಇಲ್ಲಿನ ಸಭೆಗೆ ಗೈರಾಗಿದ್ದಾರೆ. ವಾಯವ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸಭೆ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಭೆಗೆ ಆಗಮಿಸಿದ್ದರು.
ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆಗೆ ಆಗಮಿಸುತ್ತಿದ್ದಂತೆ ಬಾಲಚಂದ್ರ ಜಾರಕಿಹೊಳಿ ಅವರು ಎಂಎಲ್ಸಿ ರವಿಕುಮಾರ್ ಅವರನ್ನು ತಮ್ಮ ಬಳಿಗೆ ಕರೆದು 'ಸರ್ ನಾನು ಹಾಜರಿದ್ದೀನಿ ನೋಡ್ರಿ' ಅಂತಾ ಹೇಳಿದ ಘಟನೆ ನಡೆಯಿತು. ಈ ವೇಳೆ ರವಿಕುಮಾರ್ ಕೂಡ ನಗುತ್ತಲೇ ಬಾಲಚಂದ್ರ ಜಾರಕಿಹೊಳಿ ಅವರ ಕೈಕುಲುಕಿದರು. ಬಾಲಚಂದ್ರ ಜಾರಕಿಹೊಳಿ ಜೊತೆಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಸಭೆಗೆ ಆಗಮಿಸಿದ್ದರು.
ಓದಿ : ತುಮಕೂರಿನಲ್ಲಿ ಮುಂದುವರಿದ ಮಳೆ : ಅಪಾರ ಪ್ರಮಾಣದ ಬೆಳೆ ಹಾನಿ-ಅನ್ನದಾತ ಕಂಗಾಲು!