ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಕಳೆದ ಮೂರು ದಿನಗಳಿಂದ ಹಾಲಿ ಹಾಗೂ ಮಾಜಿ ಪಿಡಿಒಗಳ ವಿಚಾರಣೆ ನಡೆಸುತ್ತಿದ್ದಾರೆ.
ಹಾಲಿ ಪಿಡಿಒ ವಸಂತಕುಮಾರಿ ಹಾಗೂ ಮಾಜಿ ಪಿಡಿಒ ಗಂಗಾಧರ ನಾಯಕ್ ಅವರಿಂದ ₹4 ಕೋಟಿ ಮೊತ್ತದ 108 ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿರುವ ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದ ತಂಡ, ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಒಳಗೊಂಡಂತೆ ಒಟ್ಟು 12 ಜನ ಉಪಗುತ್ತಿಗೆದಾರರನ್ನು ವಿಚಾರಣೆ ಒಳಪಡಿಸಿದೆ ಎಂದು ತಿಳಿದು ಬಂದಿದೆ.
ಜಿಪಂ ಸಿಇಒ ವಿಚಾರಣೆ : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ಜಿಪಂ ಸಿಇಒ ದರ್ಶನ ಅವರನ್ನು ತನಿಖೆಗೆ ಒಳಪಡಿಸಿದೆ. ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿರುವ ಉಡುಪಿ ಪೊಲೀಸರು ಜಿಲ್ಲಾ ಪಂಚಾಯತ್ ಸಿಇಒ ದರ್ಶನ ಕಡೆಯಿಂದ ಮಹತ್ವದ ಮಾಹಿತಿ ಪಡೆಯುತ್ತಿದ್ದಾರೆ. ಸಂತೋಷ ಕಾಮಗಾರಿ ಗುತ್ತಿಗೆ ಪಡೆದ ಕುರಿತು ಮತ್ತು ಕಾಮಗಾರಿ ನಡೆಸಿದ ಕುರಿತು ಸಿಇಒ ದರ್ಶನ ಅವರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ಸಂತೋಷ್ ಪಾಟೀಲ್ ಕುಟುಂಬಕ್ಕೆ ₹11 ಲಕ್ಷ ಪರಿಹಾರದ ಚೆಕ್ ವಿತರಿಸಿದ ಡಿಕೆಶಿ