ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿಯ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಪತ್ರ ಬರೆದಿದ್ದರು. 2021ರ ಫೆಬ್ರವರಿ 15ರಂದು ಆಶಾ ಐಹೊಳೆ ಇಲಾಖೆಗೆ ಪತ್ರ ಬರೆದಿದ್ದು, ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಆರ್‌ಡಿಪಿಆರ್‌ಗೆ ಪತ್ರ ಬರೆದಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಆ ಪತ್ರ ಇದೀಗ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ. ಇವರ ಪತ್ರದ ಮೇಲೆ ಅನುಮೋದನೆಗೆ ಆದೇಶಿಸಲಾಗಿದೆ ಎಂದು ಫೆಬ್ರವರಿ 26ರಂದು ಸಹಿ ಮಾಡಲಾಗಿದೆ. ಆದೇಶದ ಪ್ರತಿಗಳನ್ನು ಮಾರ್ಚ್ 5ರಂದು ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸೀಲ್ ಹಾಕಲಾಗಿದೆ.
ಇಬ್ಬರಿಗೆ ನೋಟಿಸ್: ಸಂತೋಷ್ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡು ಸಾಲ ನೀಡಿರುವ ಬಗ್ಗೆ ಸಮರ್ಪಕ ದಾಖಲೆ ನೀಡುವಂತೆ ಉಡುಪಿ ಪೊಲೀಸರು ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್, ಸದಸ್ಯ ಎನ್.ಎಸ್.ಪಾಟೀಲ್‌ಗೆ ನೋಟಿಸ್ ನೀಡಿದ್ದಾರೆ. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಕಚೇರಿಗೆ ಕರೆಯಿಸಿ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ. ಹಿಂಡಲಗಾ ಗ್ರಾಮ ಪಂಚಾಯಿತಿಯ 35 ಸದಸ್ಯರಿಗೆ ದೂರವಾಣಿ ಕರೆ ಮಾಡಲಾಗಿದೆ.
ಗ್ರಾ.ಪಂ. ಕಚೇರಿಗೆ ಆಗಮಿಸಿ ಮಾಹಿತಿ ನೀಡುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಸಂತೋಷ್ ಪಾಟೀಲ್ ಪರಿಚಯ ನಿಮಗಿತ್ತಾ? ನಿಮ್ಮ ವಾರ್ಡ್‌ನಲ್ಲಿ ಕೆಲಸ ಮಾಡಲಾಗಿದೆಯೇ? ಎಷ್ಟು ವೆಚ್ಚದ ಕಾಮಗಾರಿ ಮಾಡಿದ್ದರು? ಯಾವ ಇಲಾಖೆಯ ಅನುದಾನದಲ್ಲಿ ಕೆಲಸ ಮಾಡಿದ್ದರು? ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಸಂತೋಷ್ ಪಾಟೀಲ್‌ನಿಂದ ಉಪಗುತ್ತಿಗೆ ಪಡೆದ ಕಾಂಟ್ರ್ಯಾಕ್ಟರ್‌ಗಳಿಗೂ ದಾಖಲೆ ನೀಡಲು ಸೂಚನೆ ನೀಡಲಾಗಿದೆ. 12 ಉಪಗುತ್ತಿಗೆದಾರರಿಗೆ ಕಾಮಗಾರಿಗೆ ಬಳಸಿದ ಸಿಮೆಂಟ್, ಮರಳು ಸೇರಿ ಇತರ ಸಾಮಗ್ರಿ ಖರೀದಿಸಿದ್ದ ರಸೀದಿ ನೀಡುವಂತೆ ಪೊಲೀಸರು ಕೇಳಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ ಹಲವರಿಂದ ಅಜ್ಞಾತಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ