ಬೆಳಗಾವಿ: ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಘಟಕದ ಬಸ್ ಚಾಲಕ ಕಂ ನಿರ್ವಾಹಕ ಶಿವಕುಮಾರ್ ನೀಲಗಾರ ಆತ್ಮಹತ್ಯೆಗೆ ಶರಣಾದ ನೌಕರ. 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಸವದತ್ತಿ ಪಟ್ಟಣದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ನೌಕರ ಸಾವಿಗೆ ಶರಣಾಗಿದ್ದಾನೆ.
ಶಿವಕುಮಾರ್ ಅವರನ್ನು ತಕ್ಷಣವೇ ಕುಟುಂಬಸ್ಥರು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸಲಿಲ್ಲ. ವಾ.ಕ.ರಾ.ರ.ಸಾ ಸಂಸ್ಥೆಯ ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ ಇವರು ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ ಇಂದು ಸವದತ್ತಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಸಾರಿಗೆ ಸಿಬ್ಬಂದಿ ಅವರನ್ನು ಭೇಟಿ ಮಾಡಲಿದ್ದಾರೆ.