ಬೆಂಗಳೂರು: ರಮೇಶ ಜಾರಕಿಹೊಳಿ ವಿರುದ್ಧದ ಸಿಡಿ ನಕಲಿಯಾಗಿದ್ದು, ಹನಿಟ್ರ್ಯಾಪ್ ನಡೆಸುವ ಯತ್ನ ನಡೆದಿದೆ. ಹೀಗಾಗಿ ಈ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.
ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವತಿಯನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿವೆ, ಬಿಜೆಪಿಗೆ ಮತ್ತು ಜಾರಕಿಹೊಳಿಗೆ ಕೆಟ್ಟ ಹೆಸರು ಬರಬೇಕು ಎಂದು ಇದನ್ನು ಮಾಡಿದ್ದಾರೆ. ಯುವತಿಯ ಹಿಂದೆ ಇಬ್ಬರು ಇದ್ದಾರೆ, ಅವರ ಹಿಂದೆ ನಾಲ್ಕು ಪುರುಷರಿದ್ದಾರೆ. ಆ ನಾಲ್ಕು ಜನರು ಸಿಗಬೇಕು, ಆಮೇಲೆ ಪ್ರಕರಣ ಸಂಪೂರ್ಣವಾಗಿ ಹೊರಗೆ ಬರಲಿದೆ ಎಂದರು.
ಈಗಲೂ ನಾನು ಮಾತನಾಡುತ್ತಿರುವುದನ್ನು ಷಡ್ಯಂತ್ರ ಮಾಡಿದವರು ನೋಡುತ್ತಿದ್ದಾರೆ. ದಿನೇಶ್ ಕಲ್ಲಹಳ್ಳಿ ಅವರನ್ನು ಈ ಪ್ರಕರಣದಲ್ಲಿ ದಾರಿ ತಪ್ಪಿಸಲಾಗಿದೆ. ಅವರಿಗೆ ಮಾಹಿತಿ ಕೊಟ್ಟಿರುವವರು ಅವರನ್ನು ದಾರಿ ತಪ್ಪಿಸಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ರಾಜಕೀಯವಾಗಿ ರಮೇಶ ಜಾರಕಿಹೊಳಿ ಮುಗಿಸಲು ಷಡ್ಯಂತ್ರ
ರಾಜಕೀಯವಾಗಿ ರಮೇಶ ಜಾರಕಿಹೊಳಿ ಮುಗಿಸಲು ಷಡ್ಯಂತ್ರ ನಡೆದಿದೆ. ರಮೇಶ ಜಾರಕಿಹೊಳಿ ಅವರು ದೂರು ಕೊಡದಿದ್ದರೆ ನಾವು ಕೊಡುತ್ತೇವೆ. ಅವರಿಗೆ ಸಚಿವ ಸ್ಥಾನ ಮರಳಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಮೊದಲು ಹೊರಗೆ ಬಂದು ರಮೇಶ ಅವರು ದೂರು ಕೊಡಲಿ. ಈ ಪ್ರಕರಣ ಯಾವಾಗ ಏನು ತಿರುವು ಪಡೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ. ರಾಜೀನಾಮೆ ಕೊಟ್ಟ ದಿನ ರಮೇಶ ಸಿಕ್ಕಿದ್ದರು, ಬಳಿಕ ಅವರು ಸಿಕ್ಕಿಲ್ಲ. ಇವತ್ತು ರಮೇಶ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ಪ್ರಕರಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ
ಕಲ್ಲಹಳ್ಳಿ ಈಗ ದೂರು ವಾಪಸ್ ಪಡೆದುಕೊಂಡಿದ್ದಾರೆ, ಹಾಗಂತ ನಾವು ಸುಮ್ಮನಾಗುತ್ತೇವೆ ಎಂದು ಹೇಳಿಲ್ಲ. ಈ ಪ್ರಕರಣದ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯುತ್ತೇವೆ. ಪ್ರಕರಣದಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಬಿಡುಗಡೆ ಆಗಿರುವ ಸಿಡಿಯನ್ನು ಪರೀಕ್ಷೆಗೆ ಕಳುಹಿಸಬೇಕು. ಅದು ನಕಲಿ ಸಿಡಿ ಎಂದು ನಾನು ಈ ಮೊದಲು ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಪ್ರಯೋಗಾಲಯದಲ್ಲಿ ಸಿಡಿ ಪರೀಕ್ಷೆಯಾಗಲಿ. ಹನಿಟ್ರ್ಯಾಪ್ ಮಾಡುವ ಒಂದು ಟೀಂ ಇದೆ ಎಲ್ಲವೂ ತನಿಖೆಯಿಂದಲೇ ಹೊರಗೆ ಬರಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಒಂದು ಡ್ರಾಫ್ಟ್ ರೆಡಿ
ರಾಜಕಾರಣಿಗಳ ಸಿಡಿ ವಿಡಿಯೋ ಬಹಿರಂಗ ಹಿನ್ನೆಲೆ ಇಂತಹ ವಿಡಿಯೋಗೆ ಕಡಿವಾಣಕ್ಕೆ ಸೂಕ್ತ ಕಾನೂನು ಅಗತ್ಯ ಇದೆ. ಈಗಾಗಲೇ ಈ ಬಗ್ಗೆ ಕೆಲ ಶಾಸಕರು, ಸಚಿವರ ಜೊತೆ ಚರ್ಚೆ ಮಾಡಲಾಗಿದೆ. ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಕೂಡ ಒಂದು ಡ್ರಾಫ್ಟ್ ರೆಡಿ ಮಾಡ್ತಿದ್ದಾರೆ. ಶೀಘ್ರವೇ ಈ ಬಗ್ಗೆ ಸೂಕ್ತವಾದ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.