ಬೆಳಗಾವಿ: ಸರ್ಕಾರ ಬಳಕೆದಾರರ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಎಪಿಎಂಸಿ ಬಂದ್ಗೆ ಕರೆ ನೀಡಿದ ಹಿನ್ನೆಲೆ ಬೆಳಗಾವಿಯಲ್ಲೂ ಸಹ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ ವರ್ತಕರು ಆಕ್ರೋಶ ಹೊರಹಾಕಿದರು.
ಬೆಳಗಾವಿ ಎಪಿಎಂಸಿ ವರ್ತಕರು ಇಂದು ಬಂದ್ಗೆ ಬೆಂಬಲ ನೀಡಿದ್ದು, ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಎಪಿಎಂಸಿ ಆವರಣದಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಗೋವಾ ಸೇರಿದಂತೆ ಅಂತಾರಾಜ್ಯ ಮತ್ತು ಅಂತರ್ ಜಿಲ್ಲೆ ರಫ್ತು ಸ್ಥಗಿತವಾಗಿದೆ.
ಈ ವೇಳೆ ಮಾತನಾಡಿದ ವರ್ತಕ ಸತೀಶ ಪಾಟೀಲ್, ಈ ಮೊದಲು ಬಳಕೆದಾರರ ಶುಲ್ಕ 100 ಕ್ಕೆ ಶೇಕಡಾ 35 ರಷ್ಟಿತ್ತು. ಆದರೀಗ 1 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಹೆಚ್ಚಿನ ಹೊರೆಯಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಕೆಲ ಕಾಯ್ದೆಗಳಲ್ಲಿ ಬದಲಾವಣೆ ತಂದಿರುವ ಹಿನ್ನೆಲೆ ಸಾರ್ವಜನಿಕರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದಾಗಿ ಮಾರುಕಟ್ಟೆಗೆ ಬರುವ ಸಗಟು ಕಡಿಮೆ ಆಗಿದೆ. ಪರಿಣಾಮ ವರ್ತಕರಿಗೆ ಹೆಚ್ಚಿನ ಆರ್ಥಿಕ ಹೊರೆ ಆಗುತ್ತಿದೆ ಎಂದರು.
ಸರ್ಕಾರ ಈ ಕೂಡಲೇ ಬಳಕೆದಾರರ ಶುಲ್ಕ ಏರಿಕೆ ಮಾಡಿರುವ ನಿರ್ಧಾರವನ್ನು ವಾಪಸ್ ಪಡೆದು, ವರ್ತಕರ ಹಿತ ಕಾಯಬೇಕು. ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಅನಿರ್ದಿಷ್ಟಾವಧಿವರೆಗೆ ಎಪಿಎಂಸಿ ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.