ಬೆಳಗಾವಿ: ಸಿದ್ದರಾಮಯ್ಯ ನನ್ನ ಮಧ್ಯೆ ಮನಸ್ತಾಪದ ಪ್ರಶ್ನೆ ಇಲ್ಲ. ಅವರೊಂದಿಗೆ ಹಿಂದೆಯೂ ಇದ್ದೆವು, ಈಗಲೂ ಇದ್ದೇವೆ, ಮುಂದೆಯೂ ಇರುತ್ತೇವೆ. ಸಿದ್ದರಾಮಯ್ಯ ರಾಮದುರ್ಗ ಬಂದಾಗ ಬೇರೆ ಬೇರೆ ಕಾರ್ಯಕ್ರಮ ಇತ್ತು. ಹಾಗಾಗಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಮಧ್ಯೆ ಮನಸ್ತಾಪ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಮಧ್ಯದ ಸಂಬಂಧ ಸರಿಯಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇನೂ ಇಲ್ಲ. ಪಕ್ಷದಲ್ಲೇ ಇರುವ ನಾವು ಹಂತ ಹಂತವಾಗಿ ಮೇಲೆ ಬರುತ್ತಿದ್ದೇವೆ. ಅವರು ನಮ್ಮ ಜೊತೆಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ನಮ್ಮನ್ನು ಕಡೆಗಣಿಸಿದ್ರು ಅದು ಬೇರೆ ವಿಷಯ. ಮತ್ತೆ ಕಾಲ ಬಂದೇ ಬರುತ್ತದೆ. ಅವಕಾಶಗಳು ಬಂದೇ ಬರುತ್ತವೆ. ಅವೆಲ್ಲವೂ ಆಗಿ ಹೋದಂತಹ ಘಟನೆಗಳು ಅವುಗಳ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್ನಲ್ಲಿ ನಡೆಯುತ್ತಿದೆ : ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ ಎಂದ ಡಿಕೆಶಿ ಹೇಳಿಕೆ ವಿಚಾರಕ್ಕೆ, ಸಿದ್ದರಾಮೋತ್ಸವ ಮೊದಲು ಪಕ್ಷದ ಬದಲಾಗಿ ಅಭಿಮಾನಿ ಸಂಘದಿಂದ ಮಾಡುವ ನಿರ್ಧಾರ ಆಗಿತ್ತು. ಈಗ ಅಧ್ಯಕ್ಷರು ನಾವು ಕೂಡಾ ಪಕ್ಷದಿಂದ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಸಿದ್ದರಾಮೋತ್ಸವಕ್ಕೆ ಎಷ್ಟು ಜನ ಸೇರಿಸಬೇಕು ಎನ್ನುದು ಇನ್ನೆರಡು ಮೀಟಿಂಗ್ ಬಳಿಕ ಗೊತ್ತಾಗಲಿದೆ. ಈಗಲೂ ಸಿದ್ದರಾಮೋತ್ಸವ ಪಕ್ಷದ ಬ್ಯಾನರ್ನಲ್ಲಿ ನಡೆಯುತ್ತಿಲ್ಲ. ಅಭಿಮಾನಿಗಳಿಂದ ಮಾಡುತ್ತಿದ್ದೇವೆ. ಮುಖ್ಯವಾದ ಕಾರ್ಯಕ್ರಮ ಆ.3ರಂದು ನಡೆಯಲಿದೆ. ಬೇರೆಬೇರೆ ಪಕ್ಷದ ಮುಖಂಡರ ಆಹ್ವಾನದ ಬಗ್ಗೆ ಚರ್ಚೆ ಆಗಬೇಕು. ಆ ಸಭೆ ಇದೇ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಯಾರನ್ನು ಸ್ವಾಗತಿಸಬೇಕು ಬಿಡಬೇಕು ಎನ್ನುವುದು ಸಾಮೂಹಿಕ ನಿರ್ಧಾರ ಆಗಲಿದೆ ಎಂದರು.
ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಲಿ: ಸಿದ್ದರಾಮಯ್ಯ ತಾವು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಬೇಕು. ಅಲ್ಲಿ ನಿಲ್ಲುತ್ತಾರೆ, ಇಲ್ಲಿ ನಿಲ್ಲುತ್ತಾರೆ ಎಂದು ಹೇಳುತ್ತಾರೆ. ಅವೆಲ್ಲವೂ ಊಹಾಪೋಹಗಳಷ್ಟೇ. ಅಂತಿಮವಾಗಿ ಅದನ್ನು ಸಿದ್ದರಾಮಯ್ಯ ಅವರೇ ತೆರೆ ಎಳೆಯಬೇಕು.
ಸವದತ್ತಿಯಿಂದ ಸ್ಪರ್ಧೆ ಮಾಡುವ ನಿರ್ಧಾರ ಆದರೆ ಸ್ಥಳೀಯ ಆಕಾಂಕ್ಷಿಗಳು ಅದನ್ನು ಒಪ್ಪಲೇಬೇಕು. ಆದರೆ ಸವದತ್ತಿ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸವದತ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮದೇ ಆದ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಸಲಹೆ ಕೊಟ್ಟಿದ್ದೇವೆ. ಜನವರಿಯಲ್ಲಿ ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದರು.
ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ..? : ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ, ರಾಜ್ಯ ರಾಜಕಾರಣದಲ್ಲಿ ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಲಿದೆ. ಜನವರಿಯಿಂದ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಪಕ್ಷಾಂತರ ಪರ್ವ ಆರಂಭ ಆಗಲಿದೆ. ಒಮ್ಮೊಮ್ಮೆ ಬುಕ್ಕಿಂಗ್ ಮಾಡುತ್ತಾರೆ. ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡುತ್ತಾರೆ ಎಂದರು.
ಪ್ರಭಾಕರ ಕೋರೆ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ, ಬಿಜೆಪಿ ಬೇರೆಬೇರೆ ಗುಂಪಿನಲ್ಲಿ ಚರ್ಚೆ ಆಗುತ್ತಿದೆ. ನಾವು ಬಿಜೆಪಿಯಲ್ಲಿ ಇರಬೇಕಾ, ಬೇರೆ ಪಕ್ಷಕ್ಕೆ ಹೋಗಬೇಕಾ ಎಂದು ಚರ್ಚೆ ಆಗುತ್ತಿದೆ. ಅದು ಬಿಜೆಪಿ ಪಕ್ಷ ಅಷ್ಟೇ ಅಲ್ಲ ಎಲ್ಲ ಪಕ್ಷದಲ್ಲೂ ಪಕ್ಷಾಂತರ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಪಕ್ಷದಲ್ಲೂ ತಮ್ಮ ತಮ್ಮ ಸ್ಥಾನಮಾನ ಗಟ್ಟಿ ಮಾಡಲು ಚರ್ಚೆ ಮಾಡುತ್ತಲೇ ಇರುತ್ತಾರೆ.
ಅಂತಿಮ ನಿರ್ಧಾರ ಅವರಿಗೆ ಬಿಟ್ಟಿರುವುದು. ಬಿಜೆಪಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದೆ. ಅವರನ್ನು ಸೈಡ್ ಲೈನ್ ಮಾಡಿದ್ದಾರೆ. ಈಗ ಅವರ ಮಕ್ಕಳು ಇಲ್ಲ. ಮುಂದಿನ ಚುನಾವಣೆಯಲ್ಲಿ ಪೂರ್ತಿ ಯಡಿಯೂರಪ್ಪ ಕುಟುಂಬವನ್ನು ಸೈಡ್ ಲೈನ್ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಸೇರಲು 6 ಬಿಜೆಪಿ ಕಾರ್ಪೊರೇಟರ್‌ಗಳ ಚಿಂತನೆ ವಿಚಾರಕ್ಕೆ, ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಅಸಮಾಧಾನಗೊಂಡಿದ್ದು, ಚರ್ಚೆ ನಡೆಯುತ್ತಿದೆ ಎಂದು ನಾನೂ ಕೇಳಿದ್ದೇನೆ. ನೇರವಾಗಿ ಪಾಲಿಕೆಗೆ ಕೆಲಸ ಕೇಳಬಾರದು. ನಮ್ಮನ್ನು ಕೇಳಬೇಕು ಎಂದು ಈಗಾಗಲೇ ಅವರಿಗೆ ಸಂದೇಶ ಕಳಿಸಿದ್ದಾರೆ. ಏನೇ ಆದರೂ ನಮ್ಮನ್ನ ಕೇಳಬೇಕು.
ಪಾಲಿಕೆಗೆ ಹೋಗಬಾರದು ಅಂತಾ ತಾಕೀತು ನೀಡಿದ್ದಾರೆ. ಬಿಜೆಪಿ ಪಾಲಿಕೆ ಸದಸ್ಯರು ಇದನ್ನ ಓಪನ್ ಆಗಿ ಹೇಳಬೇಕು. ಈಗಾಗಲೇ ಇಬ್ಬರು ಬಿಜೆಪಿ ಶಾಸಕರ ಪೈಕಿ ಒಬ್ಬರು ಮೇಯರ್, ಇನ್ನೊಬ್ಬರು ಉಪಮೇಯರ್ ಆಗಿದ್ದಾರೆ. ಏನೇ ಸಮಸ್ಯೆ ಇದ್ರು ಅವರ ಮುಂದೆ ಹೇಳಬೇಕಷ್ಟೇ ಎಂದು ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಬಗ್ಗೆ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಇದನ್ನೂ ಓದಿ : ಮಕ್ಕಳ ಯೋಜನೆಯಲ್ಲಿ ಕಮಿಷನ್ಗೆ ಕಾಯಬೇಡಿ: ಸರ್ಕಾರಕ್ಕೆ ತಿವಿದ ಪ್ರಿಯಾಂಕ್ ಖರ್ಗೆ