ಬೆಳಗಾವಿ: ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಲ್ಲಿ ಸೂರ್ಯ ನಮಸ್ಕಾರ ನೆರವಾಗುತ್ತದೆ. ಪುರಾತನ ಭಾರತೀಯ ವ್ಯಾಯಾಮ ಇದಾಗಿದ್ದು, ಎಲ್ಲರೂ ದಿನನಿತ್ಯ ಸೂರ್ಯ ನಮಸ್ಕಾರ ಮಾಡಬೇಕು ಎಂದು ಸಂಸದೆ ಮಂಗಳ ಅಂಗಡಿ ಕರೆ ಕೊಟ್ಟರು.
ಸುವರ್ಣಸೌಧದ ಮುಂಭಾಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ವೃದ್ಧಿ ಹಾಗೂ ಮನೋಬಲ ಹೆಚ್ಚಾಗುತ್ತದೆ. ರೋಗ ಪ್ರತಿರೋಧಕ ಶಕ್ತಿ, ಸಾಮರ್ಥ್ಯ ಮತ್ತು ಜೀವನಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರ ಎಲ್ಲ ವಯೋಮಾನದವರಿಗೂ ಅನ್ವಯವಾಗುವ ಸಾಂಪ್ರದಾಯಕ ವ್ಯಾಯಾಮವಾಗಿದ್ದು, ಎಲ್ಲರೂ ದಿನನಿತ್ಯ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಾ ಜೆಡಿಎಸ್?: ಯಾರಿಗಿಲ್ಲ ಟಿಕೆಟ್?
ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಶ್ರೀಕಾಂತ ಸುಣಧೋಳಿ ಮಾತನಾಡಿ, ಸೂರ್ಯ ನಮಸ್ಕಾರ ಮಾಡಿದರೆ ರಕ್ತ ಸಂಚಾರ ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ. ಕೀಲು ನೋವು ತಡೆಗಟ್ಟುವುದರ ಜೊತೆಗೆ ಅಜೀರ್ಣ ಸಮಸ್ಯೆಗಳು ನಿವಾರಣೆಯಾಗುವುದು. ದೇಹದ ನರಗಳು ಮತ್ತು ಮೆದುಳು ಚುರುಕಾಗುವುದು ಹಾಗೂ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಲಿದೆ ಎಂದು ವಿವರಿಸಿದರು.