ಬೆಳಗಾವಿ : ಕೊರೊನಾಗೆ ಬಲಿಯಾಗಿದ್ದ ಸಚಿವ ಸುರೇಶ್ ಅಂಗಡಿ ಅವರ ಪುತ್ಥಳಿಯನ್ನು ಇಂದು ದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅನಾವರಣಗೊಳಿಸಲಾಯಿತು. ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಪುತ್ಥಳಿಯನ್ನು ಅವರ ಪತ್ನಿ ಹಾಗೂ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅನಾವರಣಗೊಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಸಂಸದರಾದ ಡಿ. ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ಉಮೇಶ್ ಜಾಧವ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಸಂಸದೆ ಮಂಗಳಾ ಅಂಗಡಿ ಹಾಗೂ ಪುತ್ರಿಯರು ಸಮಾಧಿಗೆ ಪೂಜೆ ಸಲ್ಲಿಸಿ, ಸುರೇಶ್ ಅಂಗಡಿ ಅವರ ಜೀವನ ಮತ್ತು ಸಾಧನೆ ಸ್ಮರಿಸಿ, ನಮನ ಸಲ್ಲಿಸಿದರು.
ಇದನ್ನೂ ಓದಿ: ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾರ, ಹಣ್ಣಿನ ಬುಟ್ಟಿ, ಶಾಲು, ಕಾಣಿಕೆ ನೀಡಬಾರದು: ಸರ್ಕಾರದ ಸುತ್ತೋಲೆ
ಈ ವೇಳೆ ಮಾತನಾಡಿದ ಸಂಸದೆ ಮಂಗಳಾ ಅಂಗಡಿ, ಜಗಜ್ಯೋತಿ ಬಸವೇಶ್ವರರು ಕಾಯಕ ತತ್ವದ ಅನುಯಾಯಿಯಾಗಿದ್ದರು. ಜನರ ಸಂಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ಜನನಾಯಕರಾಗಿದ್ದ ಸುರೇಶ್ ಅಂಗಡಿ ಅವರ ಸಮಾಧಿ ನಿರ್ಮಾಣಕ್ಕೆ ಸಹಾಯ ಮಾಡಿ ಸಹಕರಿಸಿ, ಕೈಜೋಡಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಅಂತಾರಾಷ್ಟ್ರೀಯ ಬಸವ ಸಮಿತಿಯ ಸದಸ್ಯರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು. ಕುಟುಂಬಸ್ಥರಾದ ಡಾ. ಸ್ಪೂರ್ತಿ ಅಂಗಡಿ, ಶ್ರದ್ಧಾ ಅಂಗಡಿ, ಸಂಕಲ್ಪ್ ಶೆಟ್ಟರ್ ಮತ್ತಿತರರು ಭಾಗಿಯಾಗಿದ್ದರು.