ಬೆಳಗಾವಿ: ಸೋಂಕಿತ ಮಕ್ಕಳನ್ನು ಪೋಷಕರ ಜೊತೆಗೆ ಮನೆಗೆ ಕಳುಹಿಸುವ ಮೂಲಕ ಕಿತ್ತೂರು ಸೈನಿಕ ಶಾಲೆಯ ಆಡಳಿತ ಮಂಡಳಿ ಎಡವಟ್ಟು ಮಾಡಿದೆ.
ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಬೇಕು ಎಂಬ ಸರ್ಕಾರದ ನಿಯಮವಿದೆ. ಆದರೆ ವರದಿ ಬರುವ ಮುನ್ನವೇ ಮಕ್ಕಳನ್ನು ಪೋಷಕರ ಜೊತೆಗೆ ಮನೆಗೆ ಕಳುಹಿಸಲಾಗಿದೆ ಎಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದಾರೆ.
ಬಾಲಕಿಯರ ವಸತಿ ಶಾಲೆಯಲ್ಲಿ ಈವರೆಗೆ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಸೇರಿ 148 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಪಾಸಿಟಿವ್, ನೆಗೆಟಿವ್ ವರದಿ ಬಂದ ವಿದ್ಯಾರ್ಥಿನಿಯರನ್ನೆಲ್ಲ ಒಂದೇ ಕಡೆ ಇರಿಸಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಪೋಷಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಕರಿ ನೆರಳು: ಗವಿಮಠದ ಜಾತ್ರೆ ರದ್ದು, ಅಂಜನಾದ್ರಿ ದೇಗುಲಕ್ಕೂ ನಿರ್ಬಂಧ!
ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಲೇ ಸೋಂಕು ವ್ಯಾಪಿಸಿದೆ. ಮೊದಲು ವಸತಿ ಶಾಲೆಯ 12 ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಹಂತ ಹಂತವಾಗಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕಳೆದ 5 ದಿನಗಳಲ್ಲಿ ಬಾಲಕಿಯರ ವಸತಿ ಶಾಲೆಯಲ್ಲಿ 148 ಕೋವಿಡ್ ಕೇಸ್ ದೃಢಪಟ್ಟಿದೆ. ಆದರೆ ರಿಪೋರ್ಟ್ ಬರುವ ಮುನ್ನವೇ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಮನೆಗೆ ಕಳುಹಿಸಿದೆ.
ಪೋಷಕರ ಬಳಿ ಪತ್ರ ಬರೆಸಿಕೊಂಡು ಸೋಂಕಿತರನ್ನು ಮನೆಗೆ ಕಳಿಸಲಾಗಿದೆ. ಸೋಂಕಿತ ಮಕ್ಕಳು ತೆರಳಿದಲ್ಲೆಲ್ಲ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕ ಶಿವಕುಮಾರ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.