ಅಥಣಿ: ಚೀನಾ ದೇಶದ ಸೈನಿಕರಿಂದ ಭಾರತೀಯ ಯೋಧರ ಹತ್ಯೆ ಮತ್ತು ಯುದ್ಧಕ್ಕೆ ಪ್ರಚೋದನೆ ಹಾಗೂ ದೇಶದ ಗಡಿಯಲ್ಲಿ ಸೈನ್ಯ ಜಮಾವಣೆ ಮಾಡುವ ಮೂಲಕ ಆಂತರಿಕ ಯುದ್ಧ ಭೀತಿ ಉಂಟು ಮಾಡುತ್ತಿರುವ ಕ್ರಮ ಖಂಡಿಸಿ ಚೀನಾದಿಂದ ಬರುವ ಸರಕುಗಳ ಆಮದು-ರಪ್ತು ಸ್ಥಗಿತಗೊಳಸಿ ತಕ್ಕ ಪಾಠ ಕಲಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಅಥಣಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅಥಣಿ ಪಟ್ಟಣದ ಬಸವೇಶ್ವರ ವೃತ್ತದಿಂದ ಶಿವಯೋಗಿ ಸರ್ಕಲ್ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸಮಾವೇಶಗೊಂಡು ಅಥಣಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ದುಂಡಪ್ಪಾ ಕೋಮಾರ ಮೂಲಕ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೃಷ್ಣಾ ನದಿ ನೀರು ಹೋರಾಟ ಮತ್ತು ರೈತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ ಬಮನಾಳ, ದೇಶದ ಸುಸ್ಥಿರತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಇಂದು ಚೀನಾ ನಿರ್ಮಿತ ವಸ್ತುಗಳ ಖರೀದಿಯನ್ನು ಕೈ ಬಿಡುವ ಮೂಲಕ ದೇಶದ ಹಿತ ಕಾಯಲು ಮತ್ತು ಭಾರತೀಯ ಯೋಧರ ಮೇಲಿನ ಹಲ್ಲೆಗೆ ಪ್ರತ್ಯುತ್ತರವಾಗಿ ಭಾರತೀಯ ಸೈನ್ಯ ತನ್ನ ಬಲ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿದರು.