ಬೆಳಗಾವಿ: ಕೋವಿಡ್ ಹೋರಾಟದಲ್ಲಿ ಸೋಂಕಿತರ ಜೀವ ಉಳಿಸುವ ಕೆಲಸ ಮಾಡಬೇಕು. ಇದರಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಆಯುಕ್ತ, ಬೀಮ್ಸ್ ವಿಶೇಷ ಆಡಳಿತ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕಳೆದ ಎರಡು ದಿನಗಳಿಂದ ಬೀಮ್ಸ್ ನಲ್ಲಿ ಸಿಬ್ಬಂದಿ, ಅಧಿಕಾರಿಗಳ ಸಭೆ ಮಾಡಿ ಅವರ ಸಮಸ್ಯೆಗಳು ಅನಿಸಿಕೆಗಳನ್ನು ಕೇಳಿದ್ದೇನೆ. ಸದ್ಯ ಬೀಮ್ಸ್ ಸಿಬ್ಬಂದಿಗೆ ವರ್ಕ್ ಶೆಡ್ಯುಲ್ ಕೊಟ್ಟಿದ್ದೇನೆ. ಅದರಂತೆ ಅವರು ಕೆಲಸ ಮಾಡಬೇಕು. ಬಿಮ್ಸ್ ನಲ್ಲಿ ಕೆಲವು ವೈದ್ಯರು ಹೊರಗೆ ಕೆಲಸ ಮಾಡ್ತಾರೆ ಎಂಬುವುದರ ಬಗ್ಗೆ ನನ್ನ ಗಮಕ್ಕೂ ಬಂದಿದೆ. ಅದನ್ನು ಸರಿ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸರ್ವಿಸ್ ರೂಲ್ಸ್ ಪ್ರಕಾರ ಅನುಮತಿ ಇದೆಯೋ ಇಲ್ಲವೋ ಬೇರೆ ವಿಚಾರ. ಆದ್ರೆ,ಸದ್ಯ ನಮ್ಮ ಹೋರಾಟ ಕೋವಿಡ್ ವಿರುದ್ಧ ಇದೆ. ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಹಿರಿಯ, ಕಿರಿಯ ಎಲ್ಲ ವೈದ್ಯರು ಚಿಕಿತ್ಸೆ ಹೋಗಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ, ಪೌಷ್ಠಿಕ ಆಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೊಂದು ಬಾರಿ ಸುಧಾರಿಸಿಕೊಳ್ಳಲು ಅವಕಾಶ ಕೊಡುತ್ತೇವೆ. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೀಮ್ಸ್ ಆಸ್ಪತ್ರೆಯಲ್ಲಿ ಸರ್ಜನ್ ಕೊರತೆ ಇದೆ. ಗದಗ,ಧಾರವಾಡ ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಪಿಜಿ ಕೋರ್ಸ್ ಇಲ್ಲ. ಅದೊಂದು ಸಮಸ್ಯೆ ಆಗಿದೆ. ಇನ್ನು ವಿಶೇಷವಾಗಿ ಬೀಮ್ಸ್ ನಲ್ಲಿ ಬ್ಲಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ಕೊಡುವ ಇಬ್ಬರೇ ವೈದ್ಯರು ಇದ್ದಾರೆ. ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಇಎಸ್ಐ ಆಸ್ಪತ್ರೆಯಿಂದ ಒಬ್ಬರನ್ನು, ಗದಗ ಹಾಗೂ ಹುಬ್ಬಳ್ಳಿಯಿಂದ ಮೂರು ಜನ ಪಿಜಿ ಸ್ಟೂಡೆಂಟ್ ಗಳನ್ನು ಡೆಪ್ಯುಟ್ ಮಾಡಿಕೊಳ್ಳಲಾಗಿದೆ. ಬೀಮ್ಸ್ ನಲ್ಲಿ ಕನಿಷ್ಠ 9 ಜನ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಆಗಬೇಕು ಎಂದು ಮಾಹಿತಿ ನೀಡಿದರು.
35 ಜನ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದೆ. ಬ್ಲ್ಯಾಕ್ ಫಂಗಸ್ ಶಸ್ತ್ರ ಚಿಕಿತ್ಸೆ ಮಾಡಲು ಹೆಚ್ಚಿನ ಉಪಕರಣಕ್ಕೆ ಟೆಂಡರ್ ಮಾಡಿಕೊಳ್ಳಲಾಗುವುದು. ಇನ್ನು ಗುತ್ತಿಗೆ ನೌಕರರ ಟೆಂಡರ್ ಅವಧಿ ಮುಗಿದಿದೆ ಎಂದು ತಿಳಿಸಿದರು.