ಚಿಕ್ಕೋಡಿ: ಕೋವಿಡ್ ದೃಢವಾಗಿದ್ದ ವ್ಯಕ್ತಿಗೆ ಉಸಿರಾಟ ತೊಂದರೆ ಇದ್ದರೂ, ಯಾವುದೇ ಸಮಸ್ಯೆ ಇಲ್ಲವೆಂದು ವೈದ್ಯರು ಹೇಳಿಕಳುಹಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ನಡುರಾತ್ರಿಯಲ್ಲಿ ರೋಗಿಯು ನರಕಯಾತನೆ ಅನುಭವಿಸಿದ ಘಟನೆ ಶಿರಗುಪ್ಪಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಮೂಲದ ವ್ಯಕ್ತಿಗೆ ಱಪಿಡ್ ಪರೀಕ್ಷೆಯಲ್ಲಿ ಸೋಂಕು ದೃಢವಾಗಿತ್ತು. ವ್ಯಕ್ತಿಯನ್ನು ಶಿರಗುಪ್ಪಿ ವೈದ್ಯರು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಶಿರಗುಪ್ಪಿಯಿಂದ ಅಥಣಿಗೆ ಹೋದ ಸೋಂಕಿತ ವ್ಯಕ್ತಿಯನ್ನು ಪರೀಕ್ಷಿಸಿ ಏನು ಆಗಿಲ್ಲ, ಕೋವಿಡ್ ಇಲ್ಲ. ಮನೆಗೆ ಹೋಗಿ ಎಂದು ಅಥಣಿ ವೈದ್ಯರು ತಿಳಿಸಿದ್ದರು ಎನ್ನಲಾಗ್ತಿದೆ. ಇದರಿಂದ ರೋಗಿ ಗ್ರಾಮಕ್ಕೆ ಮರಳಿ ತನ್ನ ತೋಟದ ಮನೆಯಲ್ಲಿ ವಾಸವಿದ್ದ.
ಆದ್ರೆ ಉಸಿರಾಟ ತೊಂದರೆ ಇದೆ ಎಂದು ಹೇಳಿದರೂ ಸಹ ವೈದ್ಯರು ಚಿಕಿತ್ಸೆಗೆ ಮುಂದಾಗಿಲ್ಲ. ಇದರಿಂದ ಮನೆಗೆ ಬಂದ ರೋಗಿಗೆ ಉಸಿರಾಟದ ಸಮಸ್ಯೆ ಉಲ್ಬಣವಾಗಿದೆ. ಸದ್ಯ ವ್ಯಕ್ತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಥಣಿ ಸಾರ್ವಜನಿಕ ಆಸ್ಪತ್ರೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.