ಬೆಳಗಾವಿ: ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವನ್ನು ತಕ್ಷಣವೇ ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಡ್ರಗ್ಸ್ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ತೊಟ್ಟರು. ಈ ವೇಳೆ ಮಾತನಾಡಿದ ಎಬಿವಿಪಿ ಕಾರ್ಯಕರ್ತ ಪೃಥ್ವಿಕುಮಾರ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಿ ಸಂಗ್ರಹ ಎಂಬ ವಿನೂತನ ಅಭಿಯಾನ ಹಮ್ಮಿಕೊಂಡಿದೆ.
ರಾಜ್ಯದ ಹಲವಾರು ಕಾಲೇಜುಗಳ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ ಪೂರೈಸಲಾಗುತ್ತಿದೆ. ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಈ ದಂಧೆಯಲ್ಲಿ ಭಾಗಿಯಾದವರ ವಿರುದ್ದ ಕೇಂದ್ರ ಸರ್ಕಾರ ದೇಶದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.