ಬೆಳಗಾವಿ: ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧಿಸುವ ಸಂಬಂಧ ಬೆಂಬಲಿಗರಿಂದ ಬರುತ್ತಿರುವ ಒತ್ತಾಯದ ಕುರಿತಾಗಿ ಶ್ರದ್ಧಾ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಸ್ಪರ್ಧೆ ಸಂಬಂಧ ನಾನು ಏನೂ ಯೋಚನ ಮಾಡಿಲ್ಲ. ಆದರೆ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನಮ್ಮ ತಂದೆಯವರು ಮಾಡಬೇಕಿದ್ದ ಕೆಲಸಗಳನ್ನು ಮುಂದುವರಿಸಬೇಕಿದೆ. ಜನರು ಬಂದು ಹೇಳಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಫಾಲೋಅಪ್ ಮಾಡುತ್ತಿರುತ್ತೇನೆ ಎಂದಿದ್ದಾರೆ.
ಕೆಲಸದ ನಿಮಿತ್ತ ಕ್ಷೇತ್ರದ ಜನರು ಬಂದು ಭೇಟಿಯಾಗುತ್ತಿರುತ್ತಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಷ್ಟೇ ಅಲ್ಲದೇ, ಎಲ್ಲರೂ ಬರುತ್ತಾರೆ. ಜನ ಬಂದು ನನ್ನ ಭೇಟಿಯಾದಾಗ ಅವರ ಪ್ರೀತಿ ನೋಡಿ ಖುಷಿಯಾಗುತ್ತದೆ. ನನ್ನ ಕೈಯಿಂದ ಆದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಕೇವಲ ನನ್ನ ಕೈಯಲ್ಲಿ ಇಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಜನರಿಂದ ಸ್ಪರ್ಧಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಅದನ್ನು ಪಕ್ಷ, ಹೈಕಮಾಂಡ್, ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ. ನನ್ನ ಕೆಲಸ ಏನಿದೆಯೋ ಅದನ್ನು ನಾನು ಮಾಡುತ್ತೇನೆ. ಟಿಕೆಟ್ಗಾಗಿ ಅಲ್ಲ ಎಂದು ಶ್ರದ್ಧಾ ಸ್ಪಷ್ಟಪಡಿಸಿದರು.
ನಾವು ನಮ್ಮ ಕುಟುಂಬದ ಅಭಿಮಾನಿಗಳ ಜತೆಗಿರುತ್ತೇವೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ. ಮುಂದಿನ ವಿಧಾಸಭೆ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಈ ವಿಷಯವಾಗಿ ನೇರವಾಗಿ ನಾನು ಯಾರ ಜತೆಗೂ ಚರ್ಚೆ ಮಾಡಿಲ್ಲ ಎಂದು ಶ್ರದ್ಧಾ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:'ನನ್ನ ಮಾತಿನಿಂದ ಮೂಲ ಕ್ರೈಸ್ತರಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಕೋರುತ್ತೇನೆ'