ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈವರೆಗೆ ಕೊಟ್ಟ ಎಲ್ಲಾ ಮಾತುಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ನಿರ್ಣಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಯಡಿಯೂರಪ್ಪನವರು ಕೊಟ್ಟ ಮಾತನ್ನು ಇವತ್ತಿನವರೆಗೂ ನಡೆಸಿಕೊಂಡು ಬಂದಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದು, ಈ ಕುರಿತು ವರಿಷ್ಠರು ಮತ್ತು ಸಿಎಂ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂಗೆ ಬಿಟ್ಟ ವಿಚಾರ. ನಾನು ಸಮಾಧಾನವಾಗಿದ್ದೇನೆ, ಕೊಟ್ಟ ಖಾತೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಸಂಪುಟ ವಿಸ್ತರಣೆ ಮಾಡುವಾಗ ಬಹಳ ಜನರಿಗೆ ಅಪೇಕ್ಷೆ ಇರುತ್ತದೆ. ಆದರೆ ಶೇಕಡ 10 ಕ್ಕಿಂತ ಹೆಚ್ಚು ಸಚಿವ ಸ್ಥಾನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಎಲ್ಲವನ್ನು ನಿಭಾಯಿಸುವ ಶಕ್ತಿ ಸಿಎಂ ಬಿಎಸ್‌ವೈ ಬಳಿ ಇದೆ. ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾದ ಮಾತು, ಆ ಬಗ್ಗೆ ಡಿಕೆಶಿಗೆ ಏನಾದರೂ ಕನಸು ಬಿದ್ದಿದ್ರೆ ಅವನನ್ನೇ ಕೇಳಿ ಎಂದು ತಿರುಗೇಟು ನೀಡಿದರು.
ಇನ್ನು ಕಾಂಗ್ರೆಸ್ ತೊರೆದವರು ಮತ್ತೆ ಕಾಂಗ್ರೆಸ್ ಸೇರ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವರು ಡಿಕೆಶಿಗೆ ಒಳ್ಳೆಯದು ಮಾಡಲಿ. ಸಿಎಂ ಬದಲಾವಣೆ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಪಕ್ಷವೇ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಅಂತ ಹೇಳಿದೆ. ಸಿಎಂ ಬದಲಾವಣೆ ಬಗ್ಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚು ಆಸಕ್ತಿ ಇದೆ ಎಂದರು.