ಬೆಳಗಾವಿ : ನೈಟ್‍ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಯಾವುದೇ ಕಾರಣಕ್ಕೂ ಜನರ ಮೇಲೆ ಬಲ ಪ್ರಯೋಗ ಮಾಡದೇ ಪೊಲೀಸರು ಮಾನವೀಯವಾಗಿ ವರ್ತಿಸಬೇಕು ಎಂದು ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪೊಲೀಸರು ಸಾರ್ವಜನಿಕರ ಮೇಲೆ ಬಲ ಪ್ರಯೋಗ ಮಾಡದೇ ಜನರಿಗೆ ತಿಳುವಳಿಕೆ ಮೂಡಿಸಬೇಕು. ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಎಂಬ ಮೂರು ಆಯುಧಗಳನ್ನು ಬಳಸಬೇಕು ಎಂದರು.
ಜನರ ಮೇಲೆ ಬೇಕಾಬಿಟ್ಟಿಯಾಗಿ ಫೈನ್ ಹಾಕಬಾರದು. ಇಂತಹ ಪರಿಸ್ಥಿಯಲ್ಲಿ ಜನರ ಬೆಂಬಲ ಪಡೆದು ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು. ಹಿರಿಯ ಅಧಿಕಾರಿಗಳು ರಸ್ತೆಗೆ ಇಳಿದು ಕೆಲಸ ಮಾಡಬೇಕು.
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ಸಾಕಷ್ಟು ಹರಿದಾಡುತ್ತಿವೆ. ಅದಕ್ಕೆ ಜನರು ಯಾವುದೇ ರೀತಿ ಕಿವಿ ಕೊಡಬಾರದು ಏನೇ ಸಮಸ್ಯೆ ಇದ್ದರೂ 112 ತುರ್ತು ಸಹಾಯವಾಣಿ ಬಳಸಿಕೊಳ್ಳಬೇಕು ಎಂದರು.
ಸಿಟಿಯಲ್ಲಿ ವಿನಾಕಾರಣ ಯಾರು ಓಡಾಡಬಾರದು, ಅಂತವರ ಮೇಲೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ವೀಕೆಂಡ್ ಕರ್ಫ್ಯೂ ವಿಚಾರ ಜನರಲ್ಲಿ ಗೊಂದಲ ಇದೆ. ಅಂದು ಅಗತ್ಯ ಸೇವೆ ಹೊರತು ಪಡಿಸಿ ಇನ್ನುಳಿದ ಯಾವುದೇ ರೀತಿ ಸೇವೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.