ಬೆಳಗಾವಿ: ಲಾಕ್ಡೌನ್ ಪರಿಣಾಮ ದೇವಸ್ಥಾನಗಳಿಗೆ ಬೀಗ ಹಾಕಲಾಗಿದ್ದು, ಬಡ ಅರ್ಚಕರ ಕುಟುಂಬಗಳ ನೆರವಿಗೆ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಹಾಗೂ ಜಿಲ್ಲೆಯ ಸವದತ್ತಿಯ ರೇಣುಕಾದೇವಿ ದೇವಸ್ಥಾನ ಟ್ರಸ್ಟ್ ಮುಂದಾಗಿವೆ.
ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದೆ. 50 ದಿನಗಳಿಂದ ಜಿಲ್ಲೆಯ ಎಲ್ಲಾ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಿ ದರ್ಜೆಯ ದೇವಸ್ಥಾನದ ಅರ್ಚಕರ ಬದುಕು ಸಂಕಷ್ಟದಲ್ಲಿದೆ. ಇಂತಹ ಬಡ ಅರ್ಚಕರ ಕುಟುಂಬಗಳ ನೆರವಿಗೆ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾದೇವಿ ದೇವಸ್ಥಾನ ಟ್ರಸ್ಟ್ ಮುಂದಾಗಿವೆ.
ಬೆಳಗಾವಿ ಮಹಾನಗರದಲ್ಲಿರುವ ನೂರಾರು ಅರ್ಚಕರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಯಿತು. ಸವದತ್ತಿಯ ರೇಣುಕಾದೇವಿ ದೇವಸ್ಥಾನದಲ್ಲಿ ದಿನಸಿ ಕಿಟ್ ತಯಾರಿಸಿ ಅರ್ಚಕರಿಗೆ ವಿತರಿಸಲಾಯಿತು. ಮಾರ್ಕೆಟ್ ವಿಭಾಗದ ಎಸಿಪಿ ಎನ್.ಬಿ.ಭರಮನಿ, ದೇವಸ್ಥಾನದ ಸಿಇಒ ರವಿ ಕೋಟಾರಗಸ್ತಿ, ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ದಿನಸಿ ಕಿಟ್ಗಳನ್ನು ವಿತರಿಸಿದರು.
ಸಾವಿರಾರು ಬಡ ಅರ್ಚಕರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿಯೇ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಿಂದಲೂ ನಿರ್ಗತಿಕರು, ಬಡವರು, ಕಲಾವಿದರಿಗೆ ನೆರವಿನ ಹಸ್ತ ಚಾಚಲಾಗಿದೆ. ಅಲ್ಲದೇ ಯಲ್ಲಮ್ಮ ದೇವಿ ದೇವಸ್ಥಾನದಿಂದ ಈವರೆಗೂ 8 ಸಾವಿರಕ್ಕೂ ಅಧಿಕ ಜನರಿಗೆ ದಾಸೋಹ ಕಲ್ಪಿಸಲಾಗಿದೆ.