ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸವದತ್ತಿಯಿಂದ ಸ್ಪರ್ಧಿಸುವ ಕುರಿತು ಈವರೆಗೆ ಚರ್ಚೆಯಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಗೋಕಾಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂಪುರ ಶರ್ಮಾ ವಿವಾದ್ಮಕ ಹೇಳಿಕೆಯನ್ನು ಬಿಜೆಪಿಗರು ಗಂಭೀರವಾಗಿ ಪರಿಗಣಿಸಬೇಕು. ಆಡಳಿತದಲ್ಲಿರುವ ಪಕ್ಷವು ಸಮಾಜದಲ್ಲಿರುವ ಶಾಂತಿ ಕದಡುವ ಯತ್ನಕ್ಕೆ ಮುಂದಾಗಬಾದರು. ಹೇಳಿಕೆ ನೀಡುವ ಮೊದಲು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಬೇಕಾಬಿಟ್ಟಿ ಹೇಳಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ದೇಶದ ವಾತಾವರಣ ಕೆಡುತ್ತದೆ. ಇದಕ್ಕೆ ಬಿಜೆಪಿಯವರು ಕಡಿವಾಣ ಹಾಕುವುದರ ಜೊತೆಗೆ ಅಂತವರನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದರು.
ಶಿವಸೇನೆ ಒಡೆದ ಬಳಿಕ ಬಿಜೆಪಿ ಹಾದಿ ಸುಗಮ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಳಿಸಲು ಬಿಜೆಪಿ ಎರಡು ಬಾರಿ ಪ್ರಯತ್ನ ಮಾಡಿದೆ. ಆ ಸಂದರ್ಭದಲ್ಲಿ ಶಾಸಕರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ. ಈ ಬಾರಿ ಎಲ್ಲ ಶಾಸಕರಿಗೂ ಇಡಿ, ಐಟಿ ಕೇಸ್‌ಗಳ ಬಗ್ಗೆ ಒತ್ತಡ ಹೇರಿ ಪಕ್ಷದಿಂದ ಆಫರ್ ನೀಡಿ ಶಿವಸೇನೆ ಕೋಟೆ ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಟೀಕಿಸಿದರು.
ಕಾಂಗ್ರೆಸ್ ನಿಂದ ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ: ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ, ಕಾನೂನು ಉಲ್ಲಂಘನೆ ವಿಚಾರವನ್ನು ನಮ್ಮ ಕಾರ್ಯಕರ್ತರು ತಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಕಾನೂನಾತ್ಮಕವಾಗಿ ಕಾರ್ಮಿಕ ಇಲಾಖೆಯಲ್ಲಿ ಹೋರಾಟ ಮಾಡಲಾಗಿದೆ. ಹೀಗಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ.. ಭರವಸೆ ಸಾಲದು, ಅಧಿಕೃತ ಆದೇಶ ಹೊರಡಿಸಿ ಎಂದ ಸಿದ್ದರಾಮಯ್ಯ