ಬೆಳಗಾವಿ: ಚುನಾವಣಾ ಆಯೋಗ ಬೆಳಗಾವಿ ಉಪಚುನಾವಣೆ ಕುರಿತು ಘೋಷಣೆ ಮಾಡಿದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲೇ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಅವುಗಳನ್ನು ಅವರು ಬಗೆಹರಿಸಿಕೊಳ್ಳಲಿ. ಉತ್ತರ ಕರ್ನಾಟಕ ಭಾಗದ ಸಮಸ್ಯೆ, ಸುವರ್ಣ ಸೌಧ ನಿರ್ಲಕ್ಷ್ಯ ಸೇರಿದಂತೆ ವಿವಿಧ ವಿಷಯಗಳನ್ನು ಇಟ್ಟುಕೊಂಡು ಸದ್ಯದಲ್ಲೇ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಇನ್ನು ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ನಿರ್ಧಾರ ಮಾಡಿದ ಮೇಲೆ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಿಂದ ಮೂರು ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು, ಮೂವರಲ್ಲಿ ನನ್ನ ಹೆಸರು ಸೇರಿ ಮತ್ತೆ ಇಬ್ಬರ ಹೆಸರಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಹೆಸರು ಶಿಫಾರಸು ಮಾಡಿಲ್ಲ ಎಂದರು.
ನಮ್ಮ ಪಕ್ಷದಲ್ಲಿಯೂ ರಾಜಕೀಯ ಭವಿಷ್ಯ ಹೇಳುವವರಿದ್ದಾರೆ. ವಲಸಿಗರು ಕಾಂಗ್ರೆಸ್ಗೆ ಬರುವ ಬಗ್ಗೆ ಮಾಹಿತಿ ಇಲ್ಲ. ರಮೇಶ್ ಬರುವ ಬಗ್ಗೆಯೂ ನನಗೆ ಗೊತ್ತಿಲ್ಲ. ಆದ್ರೆ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದ್ರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸಾಕಷ್ಟು ಬಾರಿ ಹೇಳಲಾಗಿದೆ. ಯಾರೇ ಬಂದ್ರು ಸ್ವಾಗತ ಎಂದರು.