ಬೆಳಗಾವಿ: ಕಂಟೇನರ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿ ನಡೆದಿದೆ. ಮಹಾರಾಷ್ಟ್ರದ ಬೀಡ್ ಮೂಲದ ಲಾರಿ ಚಾಲಕ ರಾಜೇಂದ್ರ ಡೊಯ್ಪಡೆ ಹಾಗೂ ಕಂಟೇನರ್ ಚಾಲಕ ನೀರಜ್ ಮೃತ ಚಾಲಕರು.
ಘಟನೆಯಿಂದ ಲಾರಿಯಲ್ಲಿದ್ದ ಈರುಳ್ಳಿ ಹಾಗೂ ಕಂಟೇನರ್ನಲ್ಲಿದ್ದ ಮೆಕ್ಕೆಜೋಳದ ಹಿಟ್ಟು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಮೆಕ್ಕೆಜೋಳ ಹಿಟ್ಟು ತುಂಬಿಕೊಂಡು ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಂಟೇನರ್, ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಂಟೇನರ್ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ಜಿಗಿದು, ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಕಂಟೇನರ್ ಹಾಗೂ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ತೆರವು ಮಾಡುತ್ತಿದ್ದು, ಈರುಳ್ಳಿ ಹಾಗೂ ಮೆಕ್ಕೆಜೋಳದ ಹಿಟ್ಟು ಬೇರೆ ವಾಹನಕ್ಕೆ ಡಂಪ್ ಮಾಡಲಾಗುತ್ತಿದೆ. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಸ್ನಿಂದ ಇಳಿಯುತ್ತಿದ್ದ ಬಿಎಂಟಿಸಿ ಕಂಡಕ್ಟರ್ಗೆ ಬೈಕ್ ಡಿಕ್ಕಿ- ಭೀಕರತೆಯ ವಿಡಿಯೋ