ಚಿಕ್ಕೋಡಿ: ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ಹರಿಯುತ್ತಿದ್ದು, ನದಿಯ ಹಿನ್ನೀರು ದಾಟಿ ಬರುವ ವೇಳೆ ನೀರಿನಲ್ಲಿ ಸಿಲುಕಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಮಹಾ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಾಗೂ ರಾಯಚೂರಿನ ನಾರಾಯಣಪುರ ಜಲಾಶಯದಿಂದ ಕೃಷ್ಣೆಗೆ ನೀರು ಹರಿಬಿಟ್ಟ ಹಿನ್ನೆಲೆ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿದೆ. ನದಿ ತೀರದ ತೋಟದ ವಸತಿಯಿಂದ ನದಿ ಹಿನ್ನೀರು ದಾಟಿ ಬರುವಾಗ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗುವಾಗ ಗ್ರಾಮಸ್ಥರೇ ಆತನನ್ನು ರಕ್ಷಿಸಿದ್ದಾರೆ. ನದಿ ತೀರದ ಜನರ ಕಷ್ಟಕ್ಕೆ ಸರಿಯಾಗಿ ಸ್ಪಂದಿಸದ ಚಿಕ್ಕೋಡಿ ತಾಲೂಕು ಆಡಳಿತ ಹಾಗೂ ಜನರು ಸ್ಥಳಾಂತರ ಆಗುತ್ತಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ದ ಇಲ್ಲಿನ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕೃಷ್ಣಾ ನದಿಯ ಒಳ ಹರಿವು ಈಗ 2 ಲಕ್ಷ ಕ್ಯೂಸೆಕ್ ಕ್ಕಿಂತ ಹೆಚ್ಚಿದ್ದು, ನದಿ ತೀರದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.