ಬೆಳಗಾವಿ: ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್, ಡಾ.ಎಚ್. ಸುದರ್ಶನ್ ಬಲ್ಲಾಳ್ ಹಾಗೂ ವಾದಿರಾಜ ಬಿ.ದೇಶಪಾಂಡೆ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಬೆಳಗಾವಿಯ ವಾರ್ತಾ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ಆರ್.ಸಿಯು 9ನೇ ಘಟಿಕೋತ್ಸವ ಮಾರ್ಚ್ 9 ರಂದು ಸುವರ್ಣಸೌಧದಲ್ಲಿ ನಡೆಯಲಿದೆ. ಈ ವೇಳೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಈ ಸಾಲಿನಲ್ಲಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಈ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಜ್ಞಾನಿ ಹಾಗೂ ನ್ಯಾಕ್ ಅಧ್ಯಕ್ಷ ಪ್ರೊ.ವೀರೇಂದ್ರ ಸಿಂಗ್ ಚವ್ಹಾಣ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದ 35,484 ಸ್ನಾತಕ ವಿದ್ಯಾರ್ಥಿಗಳು, 2,739 ಸ್ನಾತಕೋತ್ತರ, 188 ಪಿ.ಜಿ. ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಹಾಗೂ 86 ಪಿಎಚ್.ಡಿಗಳನ್ನು ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿ: ವಿವಿ ಪ್ರಸ್ತುತ ಭೂತರಾಮನಹಟ್ಟಿಯ ಕೇಂದ್ರ ಅರಣ್ಯ ಮೀಸಲು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಿಕೊಳ್ಳುವಂತೆ ಎರಡು ಸಲ ನಮಗೆ ನೋಟಿಸ್ ಕೂಡ ಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರ ಹಿರೇಬಾಗೇವಾಡಿಯಲ್ಲಿ ಜಾಗ ನೀಡಿ, ಕಟ್ಟಡ ನಿರ್ಮಾಣಕ್ಕೂ ಅಡಿಗಲ್ಲು ಹಾಕಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರವೇ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದರು.