ಅಥಣಿ(ಬೆಳಗಾವಿ) : ಬಯಲು ಸೀಮೆಯ ಉತ್ತರ ಕರ್ನಾಟಕ ಸಮಗ್ರ ನೀರಾವರಿಗೆ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡುವಂತೆ ಹರಿಹರ ನಿಲೋಗಿ ಮಠದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಶ್ರೀಗಳು ಮಾತನಾಡಿ, ಶಾಪಗ್ರಸ್ತ ಎಂಬಂತೆ ತಾಲೂಕಿನಲ್ಲಿ 9 ಹಳ್ಳಿಗಳು ಕೃಷಿ ನೀರಾವರಿ ಯೋಜನೆಯಿಂದ ವಂಚಿತವಾಗಿವೆ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಕಕಮರಿ, ಕೊಟ್ಟಲಗಿ, ಸುತ್ತಮುತ್ತಲಿನ ಗ್ರಾಮಗಳು ಇದುವರೆವಿಗೂ ನೀರಾವರಿ ಯೋಜನೆ ಇಲ್ಲದೆ ಇರುವುದರಿಂದ ಈ ಭಾಗದ ರೈತರು ಪರದಾಡುವಂತಾಗಿದೆ ಎಂದರು.
ರೈತರ ಪರ ನಮ್ಮ ಸರ್ಕಾರ ಎನ್ನುವರು ಈ ಭಾಗಕ್ಕೆ ನೀರಾವರಿ ಯೋಜನೆ ರೂಪಿಸಲಿ. ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಮ್ಮಜೇಶ್ವರಿ-ಕೊಟ್ಟಲಗಿ ಏತ ನೀರಾವರಿ ಯೋಜನೆ ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಸದ್ಯ ಯೋಜನೆ ಅನುಷ್ಠಾನಕ್ಕೆ ಆಮೆಗತಿಯಲ್ಲಿ ಸಾಗುತ್ತಿದೆ. ಈ ಭಾಗದ ಅಭಿವೃದ್ಧಿಗೆ ರಮೇಶ್ ಅವರಿಗೆ ಮತ್ತೆ ಜಲಸಂಪನ್ಮೂಲ ಸಚಿವ ಖಾತೆ ನೀಡುವಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಸದ್ಯ ಅಮ್ಮಜೇಶ್ವರಿ-ಕೊಟ್ಟಲಗಿ ಏತ ನೀರಾವರಿ ಯೋಜನೆ ಕೆಎನ್ಎನ್ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಭಾಗದ ರೈತರ ಕುಲಕ್ಕೆ ಈ ಯೋಜನೆ ರತ್ನವಾಗಿದೆ. ಮಾಜಿ ಸಚಿವ ಜಾರಕಿಹೊಳಿ ಒಳ್ಳೆಯ ಮನುಷ್ಯ, ಅನುಭವಿ ರಾಜಕಾರಣಿ, ಎಲ್ಲರಿಗೂ ಸಂಕಷ್ಟ ಬರುತ್ತದೆ. ಅದರಂತೆ ಅವರಿಗೂ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಮೇಶ್ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಕೊಡಲಿ, ಈ ಭಾಗದ ರೈತರ ಶ್ರೇಯೋಭಿವೃದ್ಧಿಗೆ ಮತ್ತೆ ಜಲಸಂಪನ್ಮೂಲ ಸಚಿವರಾಗಲಿ ಎಂದು ಸಿದ್ದಲಿಂಗ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಸಿಎಂ ಯಾರೆಂದು ತೀರ್ಮಾನಿಸೋದು ನಾಡಿನ ಜನತೆ: ಕುಮಾರಸ್ವಾಮಿ