ಚಿಕ್ಕೋಡಿ: ನಾಲ್ಕು ಬಾರಿ ಶಾಸಕರಾಗಿದ್ದ ಹಿರಿಯ ರಾಜಕಾರಣಿ ರಾಜು ಕಾಗೆ ದಿಢೀರನೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.
ಬಿಜೆಪಿ ನಾಯಕರಿಂದ ಬೇಸತ್ತಿರುವ ರಾಜು ಕಾಗೆ ಈಗಾಗಲೇ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರನ್ನು ಭೇಟಿಯಾಗಿ ಕಾಗವಾಡ ಇಲ್ಲವೇ ಅಥಣಿ ಕ್ಷೇತ್ರಕ್ಕೆ ತಮ್ಮ ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತ ಎಂದು ಅವರ ಬೆಂಬಲಿಗರು ಕ್ಷೇತ್ರದ ತುಂಬೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಸೋಲು ಅನುಭವಿಸಿದ್ದ ರಾಜು ಕಾಗೆ, ಉಪ ಚುನಾವಣೆ ನಿಗದಿಯಾಗುತ್ತಿದ್ದಂತೆ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಕಾಗೆ ಸರ್ಕಾರ ನೀಡಿದ ಕಾಡಾ ಅಧ್ಯಕ್ಷ ಸ್ಥಾನ ತಿರಸ್ಕರಿಸಿ ಈಗ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.