ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದಿಂದ ಹೋರಾಟ ಮಾಡಲಾಗುತ್ತದೆ. ಈ ಬಗ್ಗೆ ಸಮುದಾಯದ ಉಭಯ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಂಘಟನೆಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಯುವಕನಿಗೆ ಅನ್ಯಾಯವಾಗಿದೆ. ಈ ಹಿಂದೆ ಗುತ್ತಿಗೆದಾರರು 40% ಕಮಿಷನ್ ಆರೋಪ ಮಾಡಿದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ಕಮಿಷನ್‌ಗಾಗಿ ಈ ಯುವಕ ಬಲಿಯಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಚಿವ ಈಶ್ವರಪ್ಪಗೆ ಕಾಂಗ್ರೆಸ್ ಮುತ್ತಿಗೆ ಯತ್ನ, ಬಿಜೆಪಿಯಿಂದ ವಿರೋಧ
ಯುವಕ ಮಾನಸಿಕವಾಗಿ ಬಹಳಷ್ಟು ಸದೃಢವಾಗಿದ್ದ. ಆದ್ರೆ ಸ್ವಾಭಿಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು, ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು. ಇದೇ ವೇಳೆ, ಈಶ್ವರಪ್ಪನವರ ರಾಜೀನಾಮೆಯೊಂದೇ ಪರಿಹಾರ ಅಲ್ಲ. ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.