ಬೆಳಗಾವಿ: ರಾಜ್ಯ ಸರಕಾರವು 2020ರ ಬಜೆಟ್ ಮಂಡನೆಗೆ ಮುಂದಾಗಿದ್ದು ಬಜೆಟ್ನಲ್ಲಿ ಅಸಂಘಟಿತ ರಸ್ತೆ ವಾಣಿಜ್ಯ ವಾಹನ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಘಟಕದ ನಮ್ಮ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದೇಶ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗಾಗಿ ಚಾಲಕರು ಶ್ರಮಿಸುತ್ತಿದ್ದಾರೆ. ಅವರು ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಡವಾಗಬೇಕಾದರೆ ಅವರದ್ದೇ ಆದ ನಿಗಮ ಸ್ಥಾಪಿಸಬೇಕು. ಆದ್ದರಿಂದ ಈ ಬಾರಿಯ ಬಜೆಟ್ ಮಂಡನೆಯಲ್ಲಿ ಅಸಂಘಟಿತ ರಸ್ತೆ ವಾಣಿಜ್ಯ ವಾಹನ ಚಾಲಕರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಚಾಲಕರ ದಿನನಿತ್ಯದ ಸಂಪಾದನೆಯಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಖಾಸಗಿ ಫೈನಾನ್ಸ್ ಮತ್ತು ಲೇವಾದೇವಿದಾರರಿಂದ ತೊಂದರೆ ಅನುಭವಿಸುವಂತಾಗಿದೆ. 1977ರಲ್ಲಿ ಡಿ.ದೇವರಾಜ ಅರಸು ಅವರು, ಜಾತಿವಾರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಕಾರ್ಮಿಕ ವರ್ಗ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾರಣರಾಗಿದ್ದರು. ಅದರಂತೆಯೇ ಈಗಿರುವ ರಾಜ್ಯ ಸರಕಾರ ನಿಗಮವನ್ನು ಸ್ಥಾಪಿಸಿ ಚಾಲಕರ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.