ಬೆಳಗಾವಿ: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ದುರ್ಗಾದೇವಿ ಜಾತ್ರೆಯನ್ನು ಜಿಲ್ಲೆಯ ಗೋಕಾಕ್ ತಾಲೂಕಿನ ಪಾಮಲದಿನ್ನಿ ಗ್ರಾಮಸ್ಥರು ಅದ್ಧೂರಿಯಾಗಿ ನಡೆಸಿದ್ದಾರೆ.ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನಿನ್ನೆ ನಡೆದ ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ರಾತ್ರಿ ವೇಳೆ ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿದರು. ಒಂದೆಡೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ-ದಿನೇ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಗಡಿ ಜಿಲ್ಲೆ ಬೆಳಗಾವಿಯ ಗ್ರಾಮಗಳಲ್ಲಿ ಜನರ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ.
ಇದನ್ನೂ ಓದಿ: ಬೈಕ್ಗೆ ಕಾರು ಡಿಕ್ಕಿಯಾಗಿ ಸರ್ವೆಯರ್ ಸಾವು : CCTVಯಲ್ಲಿ ಭಯಾನಕ ದೃಶ್ಯ ಸೆರೆ
ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಹಳ್ಳಿಗಳಲ್ಲಿ ಕೋವಿಡ್ ಭಯವೇ ಇಲ್ಲದೇ ಜನರು ಜಾತ್ರೆ ಮಾಡುತ್ತಿದ್ದಾರೆ. ಸರ್ಕಾರ ಎಷ್ಟೇ ಟಫ್ ರೂಲ್ಸ್ ಜಾರಿಗೆ ತಂದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಕಟ್ಟುನಿಟ್ಟಿನ ನಿಯಮ ಜಾರಿ ತರಬೇಕಿದ್ದ ಬೆಳಗಾವಿ ಜಿಲ್ಲಾಡಳಿತ, ಗೋಕಾಕ್ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆಯಾ ಅನ್ನೋ ಅನುಮಾನ ಮೂಡಿದೆ.