ಚಿಕ್ಕೋಡಿ: ಕೊರೊನಾ ವೈರಸ್ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳ ಪರೀಕ್ಷೆಗಳನ್ನು ತಕ್ಷಣ ಮುಗಿಸಬೇಕೆಂದು ಸರ್ಕಾರದಿಂದ ಆದೇಶ ಬಂದಿದೆ. ಗುರುವಾರದಿಂದ ಆರಂಭವಾಗಿರುವ ಪರೀಕ್ಷೆ ವೇಳೆ ಫೀಸ್ ಕಟ್ಟದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹೊರಗೆ ಕೂರಿಸಿದೆ ಎಂಬ ಆರೋಪ ನಗರದಲ್ಲಿ ಕೇಳಿಬಂದಿದೆ.
ಶಾಲೆಯ ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನ ಕ್ಲಾಸ್ ರೂಮ್ ಹೊರಗೆ ಕೂರಿಸಿದ ಶಾಲಾ ಸಿಬ್ಬಂದಿ ವಿರುದ್ಧ ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸೈಂಟ್ ಫ್ರಾನ್ಸಿಸ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲದೇ ನಾವು ಶಾಲೆ ನಡೆಸಬೇಕಾದರೆ ಆ ಕಷ್ಟ ನಮಗೆ ಗೊತ್ತು ಎಂದು ಶಾಲೆಯ ಮ್ಯಾನೇಜರ್ ಮಾಧ್ಯಮದವರು ಚಿತ್ರೀಕರಿಸಲು ಹೋದಾಗ ಅವಾಜ್ ಹಾಕಿದ್ದಾರೆ.
ವಿದ್ಯಾರ್ಥಿಗಳ ಪಾಲಕರು ಶಾಲಾ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಮಕ್ಕಳನ್ನ ಹೀಗೆ ನಡೆಸಿಕೊಳ್ಳುವು ಸರಿಯಲ್ಲ, ಮಕ್ಕಳಿಗೆ ಮಾನಸಿಕ ಹಿಂಸೆ ನೀಡಲಾಗಿದೆ ಆರೋಪಿಸಿದ್ದಾರೆ. ಮೂವತ್ತಕ್ಕು ಹೆಚ್ಚು ವಿದ್ಯಾರ್ಥಿಗಳನ್ನು ಶಾಲಾ ಕೊಠಡಿಯ ಹೊರಗೆ ಕೂರಿಸಲಾಗಿತ್ತು. ಈ ರೀತಿಯ ವರ್ತನೆ ತೋರಿದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.