ಬೆಳಗಾವಿ: ನಗರದ ಮಾಳ ಮಾರುತಿ ವ್ಯಾಪ್ತಿಯಲ್ಲಿರುವ ವಂಟಮುರಿ ಕಾಲೋನಿಯ ಶ್ರೀನಗರ ಹಾಗೂ ಕಾಕತಿಯಲ್ಲಿ ರಕ್ಷಣಾ ಇಲಾಖೆ ವಶದಲ್ಲಿರುವ 745 ಎಕರೆ ಜಮೀನನ್ನು ಐಟಿ ಮತ್ತು ಬಿಟಿ ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡಬಾರದು ಎಂದು ಆಗ್ರಹಿಸಿ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಸರವಾದಿ ಶಿವಾಜಿ ಕಾಗಣೀಕರ್ ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಶ್ರೀನಗರ ಸಾಯಿ ಬಾಬಾ ಮಂದಿರದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.
ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಸರವಾದಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಳಮಾರುತಿ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಕಾಲೋನಿಯ ಶ್ರೀನಗರ ಹಾಗೂ ಕಾಕತಿಯಲ್ಲಿರುವ ರಕ್ಷಣಾ ಇಲಾಖೆಯ ವಶದಲ್ಲಿ ಇರುವ 745 ಎಕರೆ ಜಮೀನನ್ನು ರಕ್ಷಣಾ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಬೇಕೆಂದು ಈಗಾಗಲೇ ಕೇಂದ್ರ ರಕ್ಷಣಾ ಸಚಿವರನ್ನು ಎರಡು ಸಲ ಭೇಟಿಯಾಗಿರೋ ಸಿಎಂ ಬಸವರಾಜ ಬೊಮ್ಮಾಯಿಯವರು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಆದರೆ, 745 ಎಕರೆ ಜಮೀನಿನಲ್ಲಿ ರಕ್ಷಣಾ ಇಲಾಖೆ ಅರಣ್ಯ ಬೆಳೆಸಿದೆ. ರಾಜ್ಯ ಸರ್ಕಾರದಿಂದ ಐಟಿ ಪಾರ್ಕ್ ನಿರ್ಮಾಣದ ಉದ್ದೇಶಕ್ಕೆ ಮರಗಳ ಮಾರಣಹೋಮ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಹೀಗಾಗಿ ಯಾವುದೇ ಕಾರಣಕ್ಕೆ ರಕ್ಷಣಾ ಇಲಾಖೆ ಜಿಲ್ಲಾಡಳಿತಕ್ಕೆ ಜಮೀನು ಹಸ್ತಾಂತರ ಮಾಡಬಾರದು ಎಂದು ರಾಜ್ಯಪಾಲರು ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾಜಿ ಕಾಗಣೀಕರ್, 745 ಎಕರೆ ಪ್ರದೇಶದಲ್ಲಿ ಸರ್ಕಾರದವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿವಿಧ ರೀತಿಯ ಮರಗಳನ್ನು ನೆಟ್ಟು ಸಂರಕ್ಷಿಸಿ ಬೆಳೆಸಿದ್ದಾರೆ. 745 ಎಕರೆ ಅರಣ್ಯ ಪ್ರದೇಶವು ಬೆಳಗಾವಿ ನಾಗರಿಕರಿಗೆ ಸುಂದರ ನಿಸರ್ಗ ಪ್ರದೇಶವಾಗಿದೆ. ಇದುಗಳನ್ನು ಕಡಿದು ಐಟಿ ಪಾರ್ಕ್ ಮಾಡಬಾರದು ಎಂದರು.
ಓದಿ: ಮದುವೆ ಕಾರ್ಯಕ್ರಮದಲ್ಲಿ ಜಾತಿ ಆಧಾರದಲ್ಲಿ ಊಟ ಬಡಿಸಿದ ಆರೋಪ: ಪೊಲೀಸರಿಗೆ ದೂರು