ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ ಆಯ್ಕೆಯಾದ ಬೆಳಗಾವಿಯಲ್ಲಿ ಬೆರಳೆಣಿಕೆಯಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಈವರೆಗೆ 4.53 ಕೋಟಿ ರೂ. ವೆಚ್ಚದ 6 ಕಾಮಗಾರಿಗಳು ಮಾತ್ರ ಮುಕ್ತಾಯಗೊಂಡಿವೆ.
ಬೆಳಗಾವಿ ಸ್ಮಾರ್ಟ್ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿಯಾವುಲ್ಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಉಭಯ ಸರ್ಕಾರಗಳು ತಲಾ ಐದು ನೂರು ಕೋಟಿ ನೀಡಿವೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ನಗರದಲ್ಲಿ 568.09 ಕೋಟಿ ರೂ. ಮೊತ್ತದ 33 ಕಾಮಗಾರಿಗಳು ಪ್ರಗತಿಯಲ್ಲಿದ್ದು, 232.02 ಕೋಟಿ ರೂ. ವೆಚ್ಚದ 29 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 173.77 ಕೋಟಿ ವೆಚ್ಚದ 11 ಕಾಮಗಾರಿಗಳಿಗಾಗಿ ವಿಸ್ತೃತ ಯೋಜನಾ ವರದಿ ತಯಾರಾಗುತ್ತಿದೆ. 7.08 ಕೋಟಿ ರೂ. ಮೊತ್ತದ ಒಂದು ಕಾಮಗಾರಿ ಯೋಜನಾ ಹಂತದಲ್ಲಿದೆ ಎಂದು ತಿಳಿಸಿದರು.
ಮುಂದಿನ ಮೂರು ತಿಂಗಳಲ್ಲಿ 78.11 ಕೋಟಿ ಮೊತ್ತದ 16 ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಗುಣಮಟ್ಟದ ಯೋಜನೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.