ಗೋಕಾಕ್: ಚುನಾವಣಾ ಆಯೋಗದಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.
ಜೋಳಿಗೆ ಹಾಕಿಕೊಂಡು ಮತಯಾಚಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದಾರೆ.
ಉಪ್ಪಾರಹಟ್ಟಿ ಗ್ರಾಮದಲ್ಲಿ ಮತಯಾಚಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ನಾಗರಿಕರಾಗಿ ಕಾನೂನು ಪಾಲಿಸುವುದು ನಮ್ಮ ಕರ್ತವ್ಯ. ನನ್ನ ವಿರುದ್ಧ ಕೇಸ್ ದಾಖಲಾಗಿದ್ರೆ ಏನು ಮಾಡಬೇಕೆಂದು ವಿಚಾರಿಸುವೆ. ನಾನು ಜಂಗಮನಾಗಿ ಹುಟ್ಟಿರುವುದು. ಜೋಳಿಗೆ ನಮ್ಮ ಜನ್ಮಸಿದ್ಧ ಹಕ್ಕು. ಕಾನೂನಾತ್ಮಕವಾಗಿ ನಾನಿದನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದರು.
ಧಾರ್ಮಿಕವಾಗಿ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮತದಾನ ಅಂದ್ರೆ ಮತವನ್ನು ದಾನ ಮಾಡೋದು. ಜೋಳಿಗೆಯಲ್ಲಿ ಕಾಣಿಕೆ ಹಾಕಿದ್ರೂ ದಾನ, ಮತ ಹಾಕುವುದೂ ದಾನವೇ ಆಗಿದೆ ಎಂದರು.
ನನ್ನ ದೃಷ್ಟಿಯಲ್ಲಿ ದುಡ್ಡು ಕೊಟ್ಟು ಮತ ಪಡೆದರೆ ಮಾತ್ರ ದೊಡ್ಡ ಅಪರಾಧ. ಅದು ನಮ್ಮ ಗೋಕಾಕ್ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅದನ್ನು ಪ್ರಶ್ನಿಸುವ ಕಾನೂನಿನ ಶಕ್ತಿ ಬೇಕಾಗಿದೆ. ಅದನ್ನು ಬಿಟ್ಟು ಜೋಳಿಗೆ ಹಾಕಿ ಮತ ಕೇಳಿದ್ರೆ ಕೇಸ್ ಹಾಕೋದು ದೊಡ್ಡ ಸಾಹಸ ಅಲ್ಲ ಎಂದರು.