ಬೆಳಗಾವಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಚಿಕ್ಕೋಡಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯಲಿರುವ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಎನ್ಸಿಪಿ ಮುಖ್ಯಸ್ಥ ಇಂದು ಚಿಕ್ಕೋಡಿ ಉಪವಿಭಾಗದ ಅಂಕಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಪ್ರತಿಮೆ ಅನಾವರಣ ಸೇರಿ ಇಡೀ ದಿನ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು. ಬುಧವಾರ ಬೆಳಗಾವಿಯ ಮರಾಠಾ ಬ್ಯಾಂಕ್ ಮತ್ತು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಸಮಿತಿ ಜ್ಯೋತಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶರದ್ ಪವಾರ್ ಅವರು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಜೊತೆಗೆ ಕಳೆದ ಮೂವತ್ತು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದು ಆಗಾಗ ಕೋರೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇನ್ನು, ಇತ್ತೀಚಿಗೆ ಶರದ್ ಪವಾರ್ ಬೆಳಗಾವಿ ಗಡಿ ವಿಚಾರದ ಕುರಿತಂತೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ಸಹೋದರ ಅಜಿತ್ ಪವಾರ್ ಕಳೆದೊಂದು ವಾರಗಳ ಹಿಂದಷ್ಟೇ ಕರ್ನಾಟಕ ಗಡಿ ವಿಚಾರ ಕೆದಕಿದ್ದರು. ಹೀಗಾಗಿ ಶರದ್ ಪವಾರ್ ಬೆಳಗಾವಿ ಪ್ರವಾಸ ಎಲ್ಲರ ಗಮನ ಸೆಳೆದಿದೆ.
ನಾಳೆ ಮರಾಠಾ ಬ್ಯಾಂಕ್ ಮತ್ತು ಜ್ಯೋತಿ ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ಗಡಿ-ವಿವಾದದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಎಂಇಎಸ್ ನಾಯಕರು ಭೇಟಿ ಮಾಡಿ ಗಡಿ ವಿಷಯ ಪ್ರಸ್ತಾಪಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್