ಬೆಳಗಾವಿ: ಪಶ್ಚಿಮ ಶಿಕ್ಷಕರ, ವಾಯವ್ಯ ಪದವೀಧರ, ಶಿಕ್ಷಕರ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ಮತ ಎಣಿಕೆ ಆರಂಭವಾಗಿದೆ. ಬೆಳಗಾವಿಯ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಪ್ರತಿ ಕ್ಷೇತ್ರದ ಮತ ಎಣಿಕೆಗೆ ಒಟ್ಟು 11 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇ.66.18ರಷ್ಟು ಮತದಾನ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ. 84.30ರಷ್ಟು ಮತದಾನವಾಗಿತ್ತು. ಹಾಗೆಯೇ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ. 86.67ರಷ್ಟು ಮತದಾನವಾಗಿದೆ.
ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿ ಇದೆ. ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮಧ್ಯೆ ಪೈಪೋಟಿ ಇದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್.ಬಿ.ಬನ್ನೂರು ಸ್ಪರ್ಧೆಗಿಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಚುನಾವಣಾ ವರ್ಷ ಹಿನ್ನೆಲೆ ಉಭಯ ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಖಾತೆ ಓಪನ್ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ: ಮತ ಎಣಿಕೆ ಕೋಟಾ ಫಿಕ್ಸ್ ಆದ ಮೊದಲ ಸುತ್ತಿನಲ್ಲೇ ಆಯ್ಕೆಯಾಗಿ ಬರುತ್ತೇನೆ ಎಂದು ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ನಾಯಕರು ಉತ್ತಮ ಕೆಲಸ ಮಾಡಿದ್ದಾರೆ. ಐವರು ಮತದಾರರ ಜವಾಬ್ದಾರಿ ಓರ್ವ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಲಾಗಿತ್ತು. ಕಾಂಗ್ರೆಸ್ನವರು ಕೊನೆ ಕ್ಷಣದಲ್ಲಿ ಹಣ ಹಂಚಿಕೆ ಮಾಡಿದರು. ಆದರೆ, ಶಿಕ್ಷಕರು ಪ್ರಜ್ಞಾವಂತರು ನನ್ನ ಪರವಾಗಿ ಮತ ಚಲಾಯಿಸಿದ್ದಾರೆಂಬ ವಿಶ್ವಾಸ ಇದೆ ಎಂದಿದ್ದಾರೆ.
ಇನ್ನೊಂದೆಡೆ ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಕೂಡ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ನಾನು ಆಯ್ಕೆಯಾಗುತ್ತೇನೆ ಎಂದಿದ್ದಾರೆ.
ವಾಯವ್ಯ ಶಿಕ್ಷಕರ ಮತಗಟ್ಟೆ ಎಣಿಕೆ ಕೇಂದ್ರದಲ್ಲಿ ಗೊಂದಲ: ಮತಗಟ್ಟೆ ಏಣಿಕೆ ಕೇಂದ್ರದಲ್ಲಿ ಚಂದ್ರಶೇಖರ ಲೋನಿ ಪರವಾಗಿ ಏಜೆಂಟ್ ರಿಂದ ಆಕ್ಷೇಪ ವ್ಯಕ್ತವಾಯಿತು. ಮತ ಬಾಕ್ಸ್ ಬಣ್ಣ ಬದಲಾಗಿದೆ ಎಂದು ಆಕ್ಷೇಪಿಸಿದ್ದು, ಚುನಾವಣಾಧಿಕಾರಿ ಮಧ್ಯೆ ಪ್ರವೇಶಿಸಿ ಆರಸಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಬಾಕ್ಸ್ ಬಣ್ಣ ಮುಖ್ಯವಲ್ಲ. ಬಾಕ್ಸ್ ನಲ್ಲಿರುವ ಬ್ಯಾಲೆಟ್ ಪೇಪರ್ ಮತ್ತು ಮತಗಟ್ಟೆ ಸಂಖ್ಯೆ ಮುಖ್ಯ. ಯಾರೇ ಗಲಾಟೆ ಮಾಡಿದ್ರೆ ಹೊರಗೆ ಹಾಕ್ತಿನಿ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ, ಐಡಿ ಕಾರ್ಡ್ ಇಲ್ಲದೇ ಹನುಮಂತ ನಿರಾಣಿ ಪಿಎ ಸುರೇಶ್ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಆರೋಪ ಕೇಳಿ ಬಂತು. ಐಡಿ ಕಾರ್ಡ್ ಇಲ್ಲದೇ ಮತಎಣಿಕೆ ಕೇಂದ್ರ ಪ್ರವೇಶಿಸಿದ್ದಕ್ಕೆ ಜೆಡಿಎಸ್ ಏಜೆಂಟರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್‌ಗೆ ದೂರು ನೀಡಿದರು. ಪೊಲೀಸರು ಮತ್ತು ಚುನಾವಣಾ ಸಿಬ್ಬಂದಿಗೆ ತರಾಟೆಗೆ ತಗೆದುಕೊಂಡ ಆದಿತ್ಯ ಆಮ್ಲಾನ್ ಬಿಸ್ವಾಸ್, ಐಡಿ ಕಾರ್ಡ್ ತಪಾಸಣೆ ಮಾಡದೇ ಏಕೆ ಒಳಗೆ ಬಿಡ್ತೀರಿ ಎಂದು ಪ್ರಶ್ನಿಸಿದರು.
ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ: ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆಯು ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯುತ್ತಿದೆ. ಬೆಳಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನೇತೃತ್ವದಲ್ಲಿ ಮತ ಪೆಟ್ಟಿಗೆ ಇರುವ ಸ್ಟ್ರಾಂಗ್ ರೂಮ್ನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 19 ಮಂದಿ ಕಣದಲ್ಲಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಸಿಎಂ ಬೊಮ್ಮಾಯಿ ವಿಶ್ವಾಸ