ಬೆಳಗಾವಿ: ಪ್ರವಾಹಕ್ಕೆ ತುತ್ತಾಗಿ ಕ್ಷೇತ್ರದ ಜನರ ಬದುಕು ಬೀದಿಗೆ ಬಂದಿರುವ ಈ ಸಮಯದಲ್ಲಿ ಜನರ ಸೇವೆ ಮಾಡಬೇಕಾದವರು ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಗುಡುಗಿದರು.
ಗೋಕಾಕ್ ನಗರದಲ್ಲಿ ನಡೆದ ನಿರಾಶ್ರಿತರ ಪುನರ್ ವಸತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಷ್ಟದಲ್ಲಿರುವ ನಿಮ್ಮ ಸಮಸ್ಯೆ ಆಲಿಸಲು ಬಹಳಷ್ಟು ಜನ ಗೋಕಾಕ್ಗೆ ಬರಬೇಕಿತ್ತು. ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸಬೇಕಿತ್ತು. ರಾಜಕೀಯಕ್ಕೆ ಬಂದು ನೂರಾರು ಕೋಟಿ ಆಸ್ತಿ ಮಾಡಿದರೂ, ಇವತ್ತು ನಿಮ್ಮ ಕಷ್ಟ ಕೇಳಲು ಬಂದಿಲ್ಲ. ಚುನಾವಣೆಯಲ್ಲಿ ಐನೂರು ರೂಪಾಯಿ ನೋಟು ಕೊಟ್ಟರೆ ವೋಟ್ ಹಾಕುತ್ತಾರೆ ಅಂತ ಕೆಲವರು ಹೇಳಿದ್ದಾರೆ ಎಂದರು.
ಇನ್ನು ಐದು ವರ್ಷಕ್ಕೊಮ್ಮೆ ಬಂದ್ರೆ ಸಾಕು, ಸೇವೆ ಮಾಡುವ ಅವಶ್ಯಕತೆ ಇಲ್ಲ ಅಂದುಕೊಂಡಿದ್ದಾರೆ. ನಿಮ್ಮ ಸೇವೆ ಮಾಡಬೇಕಾದವರು ಒಳ್ಳೆಯ ಖಾತೆ ಬೇಕೆಂದು ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಕಾಲೆಳೆದರು.
ಅಧಿಕಾರಕ್ಕಾಗಿ ಕೆಲವರು ಹೊಡೆದಾಡುತ್ತಿದ್ದಾರೆ. ಆದರೆ, ನೆರೆ ಸಂತ್ರಸ್ತರಿಗೆ ಸತೀಶ್ ಶುಗರ್ಸ್ ನಿಂದ ನಿಸ್ವಾರ್ಥ ಸೇವೆ ಮಾಡತ್ತಿದ್ದೇವೆ. ನಮ್ಮ ಸೇವೆ ಮತಕ್ಕಾಗಿ ಅಲ್ಲ, ಜನರ ಸೇವೆಗಾಗಿ. ಆದರೆ, ಅನರ್ಹ ಶಾಸಕರ ಪಿಎಗಳು ಎಲ್ಲ ಕೆಲಸ ನಾವೇ ಮಾಡಿದ್ದೇವೆ ಅಂತ ಹೇಳಿಕೊಂಡು ಓಡಾಡುತ್ತಾರೆ. ನಾವು ಮಾಡುವ ಕೆಲಸಕ್ಕೆ ನಮಗೆ ಶ್ರೇಯಸ್ಸು ಬರಬೇಕು ಎಂದು ಅಭಿಪ್ರಾಯ ಪಟ್ಟರು.