ಬೆಳಗಾವಿ : ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರದಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಸ್ಥಳೀಯ ವಿವಿಧ ಮಠಾಧೀಶರು ಸಾಥ್ ನೀಡಿದರು.
ಖಾನಾಪುರದಲ್ಲಿ ಐದು ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಆರಂಭವಾದ ಈ ಪಾದಯಾತ್ರೆ ನಾಳೆ ಬೆಳಗ್ಗೆ ಸುಮಾರು 11ರ ಹೊತ್ತಿಗೆ ಸುವರ್ಣಸೌಧಕ್ಕೆ ತಲುಪಲಿದೆ. ಪಾದಯಾತ್ರೆಯಲ್ಲಿ ನಾಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳಲಿದ್ದಾರೆ.
'ಸಂಘರ್ಷ ಪಾದಯಾತ್ರೆ': ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಖಾನಾಪುರ ಕ್ಷೇತ್ರದ ಅಭಿವೃದ್ಧಿ, ನೆರೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಅಂಜಲಿ ನಿಂಬಾಳ್ಕರ್ 'ಸಂಘರ್ಷ ಪಾದಯಾತ್ರೆ' ಆರಂಭಿಸಿದರು. ಖಾನಾಪುರ ಪಟ್ಟಣದಿಂದ ಬೆಳಗಾವಿ ಸುವರ್ಣಸೌಧವರೆಗೆ (40 ಕಿ.ಮೀ) ಈ ಪಾದಯಾತ್ರೆ ನಡೆಯಲಿದೆ. ಅಂಜಲಿ ನಿಂಬಾಳ್ಕರ್‌ಗೆ ಆರತಿ ಮಾಡಿ ಸ್ಥಳೀಯ ಮಹಿಳೆಯರು ಬೀಳ್ಕೊಟ್ಟರು. ಇದೇ ವೇಳೆ ಹೂಮಳೆಗರೆಯಲಾಯಿತು.
ವಿಶೇಷ ಪ್ಯಾಕೇಜ್ಗೆ ಪಟ್ಟು : ಪಾದಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಇದಕ್ಕಾಗಿ ಖಾನಾಪುರ ಜನರೆಲ್ಲರೂ ಸೇರಿ ಚಲೋ ಸುವರ್ಣಸೌಧ ಹಮ್ಮಿಕೊಂಡಿದ್ದೇವೆ. ಖಾನಾಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕು.
ಎರಡು ಬಾರಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಗಡಿ ಜಿಲ್ಲೆ ಗಡಿ ತಾಲೂಕಿನ ರಸ್ತೆಗಳು ದುರಸ್ಥಿ ಆಗಬೇಕು. ಸೇತುವೆ ದುರಸ್ಥಿ ಆಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲ. ಪಿಹೆಚ್ಸಿಗಳಲ್ಲಿ ವೈದ್ಯರಿಲ್ಲದೇ ಬಂದ್ ಆಗಿವೆ. ಅತಿವೃಷ್ಟಿಯಿಂದ ಭತ್ತದ ಬೆಳೆ ಹಾನಿಯಾಗಿದ್ದಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ.
ಸರ್ಕಾರದ ವಿರುದ್ಧ ಆಕ್ರೋಶ : ಖಾನಾಪುರ ಜಾಂಬೋಟಿ ಕ್ರಾಸ್, ಪಾರಿಶ್ವಾಡ ಕ್ರಾಸ್, ಗರ್ಲಗುಂಜಿ ರಾಜಹಂಸಗಡದಿಂದ ಇಂದು ಯಳ್ಳೂರು ಗ್ರಾಮಕ್ಕೆ ತೆರಳುತ್ತೇವೆ. ಇಂದು ಯಳ್ಳೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ 5.30ಕ್ಕೆ ಸುವರ್ಣಸೌಧಕ್ಕೆ ತೆರಳುತ್ತೇವೆ.
ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಗಿಮಿಕ್ ಎಂದು ಟೀಕಿಸುವವರು ಖಾನಾಪುರ ಜನರ ಕಷ್ಟ ನೋಡಲಿ. ಎರಡು ವರ್ಷಗಳಿಂದ ಅತಿವೃಷ್ಟಿ, ಈ ಕೋವಿಡ್ ಸಂದರ್ಭದ ಜನರ ಕಷ್ಟ ನೋಡಲು ಸರ್ಕಾರ ಸಿದ್ಧ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಂಜಲಿ ನಿಂಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ದತ್ತಪೀಠ ಸ್ವಚ್ಛತಾ ಕಾರ್ಯ
ಪಾದಯಾತ್ರೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್, ಪಟ್ಟಣದಲ್ಲಿರುವ ಛತ್ರಪತಿ ಶಿವಾಜಿ, ಡಾ.ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಾದಯಾತ್ರೆಗೆ ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿಡಕಲ್ ಅಡವಿಸಿದ್ದೇಶ್ವರ ಮಠದ ದುಂಡಯ್ಯ ಸ್ವಾಮೀಜಿ ಸಾಥ್ ನೀಡಿದರು. ಖಾನಾಪುರದ ವಿವಿಧ ವೃತ್ತಗಳಲ್ಲಿ ಸಾಗಿದ ಪಾದಯಾತ್ರೆ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.