ಬೆಳಗಾವಿ : ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿರುವ ಬಿಜೆಪಿ ಜಿಲ್ಲಾ ನಾಯಕರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಶಿವಬಸವ ನಗರದ ಅವರ ನಿವಾಸದಲ್ಲಿ ಬಿಜೆಪಿ ಜಿಲ್ಲಾ ನಾಯಕರ ಸಭೆ ನಡೆದಿದೆ. ಈ ಸಭೆಗೆ ಜಾರಕಿಹೊಳಿ ಸಹೋದರರಿಗೆ ಆಹ್ವಾನ ನೀಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಪಿ.ರಾಜೀವ್, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಭಾಗಿಯಾಗಿದ್ದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಸಭೆ ನಡೆಸಲಾಗಿದೆ. ಬಜೆಟ್ನಲ್ಲಿ ಜಿಲ್ಲೆಗೆ ಯಾವ ರೀತಿಯ ಲಾಭ ಪಡೆಯಬೇಕು ಎಂಬುದು ಸೇರಿದಂತೆ ಪಕ್ಷ ಸಂಘಟನೆ ಸಂಬಂಧ ಸಭೆ ನಡೆಸಲಾಗಿದೆ.
ಸುಮಾರು ಮೂರು ಗಂಟೆಗೆ ಕಾಲ ಸುದೀರ್ಘ ಚರ್ಚೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆಯೂ ಪರಾಮರ್ಶೆ ನಡೆಸಲಾಯಿತು. ಶಿವರಾತ್ರಿ ವೇಳೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನೆಲೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ, ಎರಡು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರ ಬಳಿ ಬೇಡಿಕೆ ಇಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ಆಟೋ ಚಾಲಕನ ಬಂಧನ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಉಂಟಾಗಿರುವ ಒಡಕು ಹೈಕಮಾಂಡ್ ನಾಯಕರ ತಲೆ ಬಿಸಿಗೆ ಕಾರಣವಾಗಿದೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ