ಬೆಳಗಾವಿ : ಒಮಿಕ್ರಾನ್ ಪೀಡಿತ ಮೂರನೇ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ನಾವು ಈಗಾಗಲೇ ತಪಾಸಣೆಗೆ ಒಳಪಡಿಸಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಒಮಿಕ್ರಾನ್ ಸೋಂಕಿತರ ಕುರಿತು ಸುಧಾಕರ್ ಮಾಹಿತಿ: ನಗರದ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಒಮಿಕ್ರಾನ್ ಪೀಡಿತರ ಆರೋಗ್ಯ ತಪಾಸಣೆ ಮಾಡಿ ವರದಿ ಪಡೆದಿದ್ದೇವೆ. ಕೋವಿಡ್ ಸೋಂಕಿತರಾಗಿ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಯಾರಿಗೂ ಕೂಡ ಯಾವುದೇ ರೀತಿಯ ಸಮಸ್ಯೆ ಕಾಡಿಲ್ಲ. ಅತ್ಯಂತ ಪ್ರಮುಖವಾಗಿ ನಾವು ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದೇವೆ. ಪ್ರತಿಯೊಬ್ಬರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸುವ ಕಾರ್ಯ ಆಗುತ್ತಿದೆ ಎಂದರು.
ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮೂರನೇ ಅಲೆಯ ಬಗ್ಗೆ ನಾವು ಗಮನಹರಿಸಿದ್ದೇವೆ. ಎಲ್ಲರನ್ನ ಟೆಸ್ಟ್ ಗೆ ಒಳಪಡಿಸುತ್ತಿದ್ದೇವೆ. ಪ್ರತಿಯೊಬ್ಬರ ತಪಾಸಣೆ ಕಡ್ಡಾಯವಾಗಿ ನಡೆದಿದೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನ ಸಿದ್ಧತೆ ನೋಡಿದ್ದೇನೆ. ಎರಡು ಡೋಸ್ ಪಡೆದವರಿಗೆ ಮಾತ್ರ ಸದನಕ್ಕೆ ಪ್ರವೇಶ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ. ನಮ್ಮ ಅಧಿಕಾರಿಗಳನ್ನ ಇದನ್ನ ಪಾಲಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.