ಬೆಳಗಾವಿ : ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯೋದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಹೀಗಾಗಿ, ಎಪಿಎಂಸಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಹೇಳಿದರು.
40 ಪರ್ಸೆಂಟ್ ಸರ್ಕಾರ ಎಂಬ ಕಾಂಗ್ರೆಸ್ ಆರೋಪ ಬಗ್ಗೆ ಮಾತನಾಡಿದ ಅವರು, 40 ಪರ್ಸೆಂಟ್ ಸರ್ಕಾರ ಅಂತಾ ಯಾರು ಸಾಬೀತು ಮಾಡಿಲ್ಲ. ಅವರ ಕಾಲದಲ್ಲಿ ಎಷ್ಟಿತ್ತು. ಈ ಕಾಲದಲ್ಲಿ ಎಷ್ಟಿದೆ? ಎಂಬುವುದು ಎಲ್ಲರಿಗೂ ಗೊತ್ತಿದೆ.
ಸುಮ್ನೆ ಹೇಳೋದಕ್ಕೆ ಏನು ಬೇಕಾದರೂ ಹೇಳ್ತಾರೆ. ಕಾಂಗ್ರೆಸ್ ನವರು ಏನೇ ಆರೋಪ ಮಾಡಲಿ. ದಾಖಲಾತಿ ಬಿಡುಗಡೆ ಮಾಡಲಿ. ಅದಕ್ಕೆ ಉತ್ತರ ಕೊಡಲು ನಾವು ಸಿದ್ದರಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕಾಂಗ್ರೆಸ್ನಿಂದ ಅಧಿವೇಶನಕ್ಕೆ ಧಕ್ಕೆ ಆಗುವುದಿಲ್ಲ. ಅವರು ಏನು ಮಾಡ್ತಾರೆ? ಅದಕ್ಕೆ ಉತ್ತರ ಕೊಡಲು ನಾವು ಸಿದ್ದರಿದ್ದೇವೆ. ಕಳೆದ ಏಳೆಂಟು ವರ್ಷದಿಂದ ವಿಧಾನಸಭೆಯಲ್ಲಿ ನೋಡುತ್ತಿದ್ದೇವೆ. ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕೆ ಇದ್ದಾರೆ. ವಿರೋಧ ಮಾಡುವುದನ್ನ ಬಿಟ್ಟು ಸಾರ್ವಜನಿಕರ ಕುಂದು, ಕೊರತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿ ಎಂದು ಸಲಹೆ ನೀಡಿದರು.
ಇತ್ತೀಚೆಗೆ ವಿಧಾನಸಭೆಯಲ್ಲಿ ಸಾರ್ವಜನಿಕ ವಿಚಾರಗಳು ಚರ್ಚೆಯಾಗುವುದಿಲ್ಲ. ಯಾವುದೋ ವಿಷಯ ಚರ್ಚೆ ಮಾಡುವುದು, ಪ್ರತಿಭಟನೆ ಮಾಡುವುದನ್ನ ನೋಡುತ್ತೇವೆ. ಬೆಳಗಾವಿ ಅಧಿವೇಶನ ಮಾಡುತ್ತಿರುವುದು ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು. ಈ ನಿಟ್ಟಿನಲ್ಲಿ ಕೂಲಂಕಷವಾಗಿ ಚರ್ಚೆ ಮಾಡಿ, ಸರ್ಕಾರದ ಗಮನಕ್ಕೆ ತರಲಿ ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ: ಯಾವುದೇ ವಿಷಯ ಚರ್ಚೆಯಾದ್ರೂ ಪರಿಹಾರಕ್ಕೆ ಸರ್ಕಾರ ಸ್ಪಂದಿಸಲಿದೆ : ಸಿಎಂ