ಬೆಳಗಾವಿ: ಕಾಂಗ್ರೆಸ್ನ ಡೋಂಗಿ ರಾಜಕಾರಣ ಬಟಾಬಯಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಒಪ್ಪಿಗೆ ನೀಡಿದರೆ, ಅವರ ಮಾನ ಮರ್ಯಾದೆ ಉಳಿಯುತ್ತದೆ ಎಂದು ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸುವ ನೈತಿಕ ಅಧಿಕಾರ ಇಲ್ಲ. ಏಕೆಂದರೆ 2016ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಿನ ಕಾನೂನು ಸಚಿವರಾಗಿದ್ದಾಗ ಟಿ.ಬಿ. ಜಯಚಂದ್ರ ಮತಾಂತರ ನಿಷೇಧ ವಿಧೇಯಕದ ಕರಡು ತಯಾರಿಸಿದ್ದರು. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಆ ಕಡತಕ್ಕೆ ಸಹಿ ಹಾಕಿದ್ದರು. ಈಗ ನಾವು ಅದಕ್ಕೆ ಕೆಲ ಅಂಶಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ನವರ ಡೋಂಗಿ ಜಾತ್ಯಾತೀತ ನೀತಿಯನ್ನು ಖಂಡಿಸಬೇಕು. ಕಾಂಗ್ರೆಸ್ನವರು ಒಳಗೊಂದು, ಹೊರಗೊಂದು. ಅದು ಇಂದು ಬಟಾಬಯಲಾಗಿದೆ. ಇದರಿಂದ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಹೊರಟಿದ್ದರು. ಇನ್ಮುಂದೆ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಈಗ ಅವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ ಎಂದು ಸಚಿವ ಅಶೋಕ್ ಟಾಂಗ್ ನೀಡಿದರು.
ಒಗ್ಗಟ್ಟಿನ ನೀತಿಗೆ ಅವರು ವಿರೋಧಿಗಳಾಗಿದ್ದಾರೆ. ಪ್ರತಿಭಟನೆ ಮಾಡುವವರಿಗೆ ನಾನು ಕೇಳುತ್ತೇನೆ?. ಅವರಿಗೆ ಈ ಕಾಯ್ದೆ ಬಗ್ಗೆ ಏಕೆ ಭಯ?. ಅವರ ಅವರ ಧರ್ಮ ಉಳಿಯಬೇಕು. ಇದೀಗ ಸಿದ್ದರಾಮಯ್ಯ ಅವರು ಕಕ್ಕಾಬಿಕ್ಕಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಲ್ ಹರಿದು ಹಾಕಿದ ಡಿಕೆಶಿ ಕ್ಷಮೆ ಕೋರಬೇಕು : ಬಿಎಸ್ವೈ ಒತ್ತಾಯ