ಬೆಳಗಾವಿ: ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಕ್ಷಣಕ್ಕೆ ನೆರವಾಗುವ ಉದ್ಧೇಶದಿಂದ ವಾರ್ ರೂಮ್ ಆರಂಭಿಸಲಾಗಿದೆ. ಆದ್ದರಿಂದ ಆಕ್ಸಿಜನ್ ಕೊರತೆ, ಬೆಡ್ ಹಾಗೂ ರೆಮ್ಡೆಸಿವಿರ್ ಮತ್ತಿತರ ಮಾಹಿತಿ ಕೇಳಿ ಕರೆ ಮಾಡುವವರಿಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಸ್ಮಾರ್ಟ್ ಸಿಟಿಯ ಕಮಾಂಡ್ ಕಂಟ್ರೋಲ್ ರೂಮ್ ನಲ್ಲಿ ಆರಂಭಿಸಲಾಗಿರುವ ಕೋವಿಡ್ ವಾರ್ರೂಮ್ಗೆ ಇಂದು ಭೇಟಿ ನೀಡಿ ಅವರು ಪರಿಶೀಲಿಸಿದರು. ಕೋವಿಡ್ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಆರಂಭಿಸಲಾಗಿರುವ ವಾರ್ ರೂಮ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇಷ್ಟೆಲ್ಲ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಹೊಂದಿರುವ ವಾರ್ ರೂಮ್ ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಇದು ನಾಮಕೇವಾಸ್ತೆ ಎಂಬಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಸ್ವತಃ ಲಾಗ್ ಬುಕ್ ಪರಿಶೀಲಿಸಿದ ಸಚಿವರು:
ವಾರ್ ಸಿಬ್ಬಂದಿ ಕೈಗೊಂಡ ಕ್ರಮ ಮತ್ತಿತರ ವಿವರಗಳನ್ನು ಒಳಗೊಂಡಿರುವ ಲಾಗ್ ಬುಕ್ ಅನ್ನು ಸಚಿವ ಗೋವಿಂದ ಕಾರಜೋಳ ಅವರು ಖುದ್ದಾಗಿ ಪರಿಶೀಲಿಸಿದರು. ಲಾಗಬುಕ್ ಮತ್ತು ಕಾರ್ಯಚಟುವಟಿಕೆಗಳ ಕುರಿತು ವಾರ್ ರೂಮ್ ನಲ್ಲಿ ಕರ್ತವ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ಸ್ವೀಕೃತಗೊಂಡಿರುವ ಕರೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ಕೂಡ ಅವರು ಪರಿಶೀಲಿಸಿದರು.
ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಾಕೀತು:
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ವಾರ್ ರೂಮ್ ಸಿಬ್ಬಂದಿ ಹೊಂದಿರಬೇಕು. ಜಿಲ್ಲಾಡಳಿತ, ಬಿಮ್ಸ್, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಜತರ ಸಮನ್ವಯತೆ ಸಾಧಿಸಿಕೊಂಡು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ತಾಕೀತು ಮಾಡಿದರು.