ಬೆಂಗಳೂರು: ಸಚಿವ ಬೈರತಿ ಬಸವರಾಜ್ ವಿರುದ್ಧ ಭೂಹಗರಣ ವಿಚಾರ ಹಾಗೂ ಮಹಾರಾಷ್ಟ್ರ ಏಕಿಕರಣ ಸಮಿತಿ(ಎಂಇಎಸ್) ಉದ್ಧಟತನದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಗದ್ದಲ, ಕೋಲಾಹಲಕ್ಕೆ ಕಾರಣವಾಗಿದೆ.
ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರಿಗೆ ಸದನದಲ್ಲಿ ಸಂತಾಪ ಸೂಚಿಸಿದ ನಂತರ ನಿಯಮ 60 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಅಲ್ಲದೆ, ಈ ವಿಚಾರ ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದ್ದು, ಈ ನಿಟ್ಟಿನಲ್ಲಿ ನಿಯಮ 60 ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು.
ಭಿತ್ತಿಪತ್ರ ಪ್ರದರ್ಶನ
ಸಚಿವ ಬೈರತಿ ಬಸವರಾಜ ವಿರುದ್ಧ ಭಿತ್ತಿಪತ್ರ ಪ್ರದರ್ಶನ ಮಾಡಿದ ಕಾಂಗ್ರೆಸ್ ಸದಸ್ಯರು, ನಕಲಿ ದಾಖಲೆ ಸೃಷ್ಟಿಸಿ ಅಮಾಯಕರ ಭೂಮಿ ಕಬಳಿಸಿದ ಬೈರತಿ ಬಸವರಾಜ್ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಆಕ್ಷೇಪ:
ಇದೇ ಸಂದರ್ಭದಲ್ಲಿ ಎಂಇಎಸ್ ಪುಂಡಾಟಿಕೆ ಬಗ್ಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿ ಈ ವಿಚಾರಕ್ಕೆ ಆದ್ಯತೆ ನೀಡಿ ಚರ್ಚೆಗೆ ಅವಕಾಶ ಕೊಡಿ ಎಂದು ಜೆಡಿಎಸ್ ಸದಸ್ಯರು ಆಗ್ರಹಿಸಿದರು. ಶಾಸಕ ಕೆ.ಅನ್ನದಾನಿ ಕಪ್ಪು ಬಟ್ಟೆ ಧರಿಸಿ, ಕನ್ನಡ ಬಾವುಟದ ಶಾಲು ಹಾಕಿ ಸದನಕ್ಕೆ ಬಂದ ಕೆಲ ಜೆಡಿಎಸ್ ಸದಸ್ಯರು ಚರ್ಚೆಗೆ ಆದ್ಯತೆ ನೀಡಬೇಕೆಂದು ಪಟ್ಟುಹಿಡಿದರು.
ಒಂದು ಕಡೆ ಕೈ ಪಡೆ ಬೈರತಿ ಬಸವರಾಜ್ ರಾಜೀನಾಮೆಗೆ ಪಟ್ಟು ಹಿಡಿದರೆ, ಮತ್ತೊಂದೆಡೆ ಬಿಜೆಪಿ ಕನ್ನಡಿಗರ ವಿರೋಧಿ ಎಂದು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರಕ್ಷಿಸಿ..ರಕ್ಷಿಸಿ.. ಕನ್ನಡ ರಕ್ಷಿಸಿ.. ಎಂದು ಜೆಡಿಎಸ್ ಸದಸ್ಯರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸದನದ ಬಾವಿಗಿಳಿದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಗದ್ದಲ ಸೃಷ್ಟಿಸಿದರು. ನಿಮ್ಮವರನ್ನೆಲ್ಲಾ ಬಂದು ಕುಳಿತುಕೊಳ್ಳಲು ಹೇಳಿ ಎಂದು ಸಿದ್ದರಾಮಯ್ಯ ಅವರ ಬಳಿ ಸ್ಪೀಕರ್ ಮನವಿ ಮಾಡಿದರು.
ಸ್ಪೀಕರ್ ಮಾತನ್ನು ಕೇಳಿಸಿಕೊಳ್ಳದ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟುಹಿಡಿದರು. ಸದನದಲ್ಲಿ ಗದ್ದಲ ಜೋರಾದಾಗ ಸ್ಪೀಕರ್ ಕಾಗೇರಿ ಅವರು, ಕಲಾಪವನ್ನು ಮಧ್ಯಾಹ್ನ 2.30 ಕ್ಕೆ ಮುಂದೂಡಿದರು.
ಇದನ್ನೂ ಓದಿ: ಪರಿಷತ್ನಲ್ಲಿ ಕಾಂಗ್ರೆಸ್ ಧರಣಿ : ಕಲಾಪ ಮುಂದೂಡಿ ಬಿಜೆಪಿ ಕಾಂಗ್ರೆಸ್ ನಾಯಕರ ಸಭೆ ಕರೆದ ಸಭಾಪತಿ ಹೊರಟ್ಟಿ