ಬೆಳಗಾವಿ: ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆ ವೃತ್ತದಲ್ಲಿನ ಶಿವಾಜಿ ಪುತ್ಥಳಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ. ಪುತ್ಥಳಿಗೆ ಮಸಿ ಸುರಿದ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳು ನಗರದ ಸಂಭಾಜಿ ವೃತ್ತದಲ್ಲಿ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸ್, ಸರ್ಕಾರಿ ಬಸ್ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಸರಿತಾ ಪಾಟೀಲ್, ಶುಭಂ ಶಳಕೆ ಸೇರಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪುಂಡರು ಸೇರಿಕೊಂಡಿದ್ದರಿಂದ ಕಲ್ಲು ತೂರಾಟದಂತಹ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಸರ್ಕಾರಿ ಬಸ್, ಕಾರಿನ ಮೇಲೆ ಕಲ್ಲು ತೂರಾಟ
ಸ್ಥಳಕ್ಕೆ ಡಿಸಿಪಿ ವಿಕ್ರಂ ಆಮಟೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ಜೊತೆಗೆ ಮನೆ ಮುಂದೆ ನಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ತೂರಲಾಗಿದ್ದು, ಇದರಿಂದ ಕೆಲ ವಾಹನಗಳ ಗಾಜು ಜಖಂಗೊಂಡಿವೆ. ಗಲ್ಲಿ ಗಲ್ಲಿಗಳಲ್ಲಿ ಗುಂಪು ಗುಂಪಾಗಿ ನಿಂತಿರುವ ಯುವಕರು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಯರ್ ಬಾಟಲ್ ಒಡೆದು ಕಲ್ಲು ತೂರಾಟ ನಡೆಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪೋರ್ಸ್ ತರೆಸಿಕೊಳ್ಳಲಾಗುತ್ತಿದ್ದು, ನಗರದ ಎಲ್ಲೆಡೆ ಪೆಟ್ರೋಲಿಂಗ್ ಆರಂಭ ಮಾಡಿಸಲಾಗಿದೆ.