ಬೆಳಗಾವಿ: ಸ್ಥಳೀಯ ಸಂಸ್ಥೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಮತ್ತೆ ಬಾಲ ಬಿಚ್ಚಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ನೀಡಬೇಕು ಎಂದು ಒತ್ತಾಯಿಸಿ, ಡಿಸಿ ಕಚೇರಿ ಬಳಿ ಉದ್ಧಟತನ ನಡೆಸಿದ್ದಾರೆ.
ಬೆಳಗಾವಿ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಂಇಎಸ್ ಕಾರ್ಯಕರ್ತರು, ಅಧಿಕಾರಿಗಳ ಎದುರೇ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಜೊತೆಗೆ 20 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ರೆ ಬೆಳಗಾವಿ ಜಿಲ್ಲಾಡಳಿತ ಸ್ಥಗಿತಗೊಳಿಸುವ ತಾಕತ್ ನಮಗಿದೆ ಎಂದು ಎಂಇಎಸ್ ಮುಖಂಡ ದೀಪಕ್ ದಳವಿ ಎಚ್ಚರಿಕೆ ನೀಡಿದ್ದಾನೆ.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಎದುರೇ ಬೆಳಗಾವಿ, ಬೀದರ್, ಭಾಲ್ಕಿ ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದರು. ಇದಕ್ಕೂ ಮುನ್ನ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಕರೆಯಿಸಿ ಹುತಾತ್ಮ ದಿನಾಚರಣೆ ಆಚರಿಸಲಾಯಿತು. 1986ರ ಜೂನ್ 1ರಂದು ನಡೆದ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿಗೆ 9 ಜನ ಬಲಿಯಾಗಿದ್ದರು.
ಇದನ್ನೂ ಓದಿ: ಪಠ್ಯದಿಂದ 'ಪದ ವಾಪಸಿ'ಗೆ ಸಾಹಿತಿಗಳ ಪಟ್ಟು; ಸರ್ಕಾರದ ನಿಲುವೇನು ಗೊತ್ತಾ?