ಬೆಳಗಾವಿ : ಬೆಳಗಾವಿಯಲ್ಲಿ ಮತ್ತೆ ಗಾಂಜಾ ಗಿರಾಕಿಗಳ ಅಟ್ಟಹಾಸ ಮುಂದುವರಿದಿದೆ. ಬೈಕ್ ಓವರ್‌ಟೇಕ್ ಮಾಡಿದ ಎಂಬ ಕಾರಣಕ್ಕೆ ತಂದೆ-ತಾಯಿ ಎದುರೇ ಮಗನನ್ನು ಹತ್ಯೆ ಮಾಡಿರುವ ಘಟನೆ ನಗರದ ಪಿ ಬಿ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಹಲಗಾ ಗ್ರಾಮದ ವಿಜಯನಗರ ನಿವಾಸಿ ಮಹೇಶ್ ಕಾಮಣ್ಣಾಚೆ (35)ಹತ್ಯೆಯಾದ ದುರ್ದೈವಿ.
ಕೊಲೆಯಾದ ಮಹೇಶ್ ಕಾರ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಗ್ಯಾರೇಜ್ಗೆ ಗ್ರಾಹಕರೊಬ್ಬರು ಕಾರನ್ನು ತೆಗೆದುಕೊಂಡು ರಿಪೇರಿಗೆ ಬಂದಿದ್ದರು. ರಿಪೇರಿ ಆದ ನಂತರ ಟ್ರಯಲ್ ಮಾಡುವ ವೇಳೆ ಬೆಳಗಾವಿಯ ಹಳೇ ಪಿ.ಬಿ.ರಸ್ತೆಯಲ್ಲಿ ಗಾಂಜಾ ಮತ್ತಿನಲ್ಲಿದ್ದ ಬೈಕ್ ಸವಾರರೊಬ್ಬ ಓವರ್‌ಟೇಕ್ ವಿಚಾರದಲ್ಲಿ ಜಗಳಕ್ಕೆ ಬಂದಿದ್ದಲ್ಲದೇ ಕಾರಿನ ಕೀ ಕಿತ್ತುಕೊಂಡು ಗಲಾಟೆ ಶುರು ಮಾಡಿದ್ದಾನೆ.
ಬಳಿಕ ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗಾಂಜಾ ಮತ್ತಿನಲ್ಲಿದ್ದ ದುಷ್ಕರ್ಮಿ ತನ್ನ ಆರು ಜನ ಗೆಳೆಯರನ್ನು ಕರೆಸಿ ಚಾಕು, ಸೈಕಲ್ ಚೈನ್‌ನಿಂದ ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೆಕ್ಯಾನಿಕ್ ಮಹೇಶ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಕಸದ ಲಾರಿಗೆ ಯುವಕ ಬಲಿ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬಿಬಿಎಂಪಿ ಎಡವಟ್ಟು
ಇನ್ನೂ ಜಗಳ ನಡೆಯುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಆಸ್ಪತ್ರೆಗೆ ಹೊರಟ್ಟಿದ್ದ ಮಹೇಶ್ ತಂದೆ ಮತ್ತು ತಾಯಿ ಮಗನ ಜೊತೆಗೆ ದುಷ್ಕರ್ಮಿಗಳು ಜಗಳವಾಡುವುದನ್ನು ಕಂಡು ಅವರನ್ನು ಬಿಡಿಸಲು ಹೋಗಿದ್ದಾರೆ. ದುಷ್ಕರ್ಮಿಗಳು ಪೋಷಕರ ಮೇಲೆಯೂ ಹಲ್ಲೆ ಮಾಡಿ ನಂತರ ಮಹೇಶ್‌ಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಸದ್ಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.